Saturday 26 November 2011

ಗೆಳೆಯ ’ಸಮೀರ್’ ಇಪ್ಪತನೇ ವಸಂತಕ್ಕೆ ಕಾಲಿಟ್ಟ ಸವಿ ನೆನಪಿನಲ್ಲಿ :)


೨೬-೧೧-೨೦೧೧

ನಾನು ನಂಬಿರುವಂತೆ , ಶಿಕ್ಷಣವು ಕೇವಲ ಕ್ಲಾಸ್ ರೂಮಿನ ನಾಲ್ಕು ಗೊಡೆಗೆ ಸೀಮಿತವಾದ್ದುದ್ದಲ್ಲ . ಅದರಲ್ಲೂ ರಾ.ವಿ.ಕಾಲೇಜ್ ಎಂಬ ವಿವಿಧತೆಯ ಜಗತ್ತಿನಲ್ಲಿ ಪ್ರತಿಕ್ಷಣವೂ ಕಲಿಕೆಯೇ !! " ಒಂದು ಅಕ್ಷರಂ ಕಲಿಸಿದಾತಂ ಗುರು " ಎಂಬ ಮಾತಿನಂತೆ ಇಲ್ಲಿ ಕಾಣುವ ನನ್ನ ಪ್ರತಿಯೊಬ್ಬ ಗೆಳೆಯನೂ ಗುರುವೇ !! ಇದು ಕೇವಲ ಅತಿಶಯೋಕ್ತಿಯಲ್ಲ . ಇದು ಸತ್ಸಂಗತಿ . ಇಲ್ಲಿ , ನಾನು ಕಂಡ ಪ್ರತಿಯೊಬ್ಬರೂ ತಮ್ಮದೇ ಕ್ಷೇತ್ರದಲ್ಲಿ ನಿಪುಣರೂ-ಅದ್ವಿತೀಯರೂ ಆಗಿರುತ್ತಾರೆ . ಇಂತಹ ಶ್ರೇಷ್ಠರ ಪೈಕಿ , " ಸಮೀರ್ ಶರೀಫ್ " ಎಂಬ ಭೂಪ ಕಲಶಪ್ರಾಯವಿದ್ದಂತೆ . ಓ , ಯಾರೀತ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ ಅಲ್ವಾ ? ಕೇಳಿ ನನ್ನ ಪ್ರೀತಿಯ "ಗಾಡ್-ಫಾದರ್"ನ ಯಶೋಗಾಥೆಯನ್ನು ...

 ' ಸಮೀರ್ ನ ಮೊದಲ ಹೆಂಡತಿ ಕೋಡಿಂಗ್  ' :

 ಹೌದು ... ಈತ ಪ್ರೋಗ್ರಾಮ್ ಗಳನ್ನು ರಚಿಸುವ ಪರಿ , ಪಡುವ ಪರಿಶ್ರಮ , ಅದರಲ್ಲಿ ಕಾಣುವ ಸಾರ್ಥಕತೆ ಎಂತಹವರನ್ನು ನಿಬ್ಬೆರಗಾಗಿಸುತ್ತದೆ. ಈತ "ಜಾವ" ಭಾಷೆಯ ಮೇಲೆ ಸಾಧಿಸಿರುವ ಅಧಿಪತ್ಯವನ್ನು ಮೆಚ್ಚಲೇಬೇಕು . ಇದಕ್ಕೆ ಪೂರಕ ಎಂಬಂತೆ ಕೆಲವಾರು "ಗೇಮ್" ಗಳನ್ನು ತನ್ನ ಸ್ವಂತ-ಜ್ಞಾನದ ಆಧಾರದ ಮೇಲೆ ರಚಿಸಿರುವುದು, ಈತನ ಸೃಜನಶೀಲತೆಗೆ  ಸಾಕ್ಷಿ.
http://jinkchak.wordpress.com/category/programming/

’ಸಮೀರ್-ಸಾತ್ವಿಕ್’ಜೋಡಿ ಎಂದರೆ ಎಂತಹ ಕೋಡಿಂಗ್ ಸ್ಪರ್ಧೆಗಳಲ್ಲಿಯೂ ಗೆಲ್ಲುವ ನೆಚ್ಚಿನ ಕುದುರೆಗಳಲ್ಲಿ ಒಂದು , ಎಂಬ ಮಾತು ನಮ್ಮ ಇಡೀ ಕಾಲೇಜಿಗೆ ತಿಳಿದಿರುವ ವಿಷಯ !!

 "
 ಸೀನು ಸುಬ್ಬು ಸುಬ್ಬು ಸೀನು .....ಸೀನು ಸುಬ್ಬು ಸುಬ್ಬು ಸೀನು
 ಸೀನು ಸುಬ್ಬು ಸುಬ್ಬು ಸೀನು .....ಸೀನು ಸುಬ್ಬು ಸುಬ್ಬು ಸೀನು
 ಬಲು ಅಪರೂಪ ನಮ್ ಜೋಡಿ ಎಂಥ ಕಛೇರಿಗು ನಾವ್ ರೆಡಿ !!

 "
 ಎಂಬ ಲಗ್ನ-ಪತ್ರಿಕೆ (1967) ಹಾಡು , ಇವರನ್ನು ನೋಡಿದಾಗ ನೆನಪಾಗುತ್ತೆ  !!


’ ಆಂಗ್ಲ ಭಾಷೇಯೇ ಈತನಿಗೆ ಶರಣಾಗಿದೆ ’ :

"ಆಡು ಮುಟ್ಟದ ಸೊಪ್ಪಿಲ್ಲ .... ಸಮೀರ್ ಓದದ ಗ್ರಂಥವಿಲ್ಲ" - ಈತ ಲೆಕ್ಕವಿಲ್ಲದಷ್ಟು ಆಂಗ್ಲದ ಕಥೆ,ಕವಿತೆ,ಕಾದಂಬರಿಗಳನ್ನು ಓದಿರುತ್ತಾನೆ. ಈತ ತನ್ನ ಲೇಖನಗಳಲ್ಲಿ ಬಳಸುವ ಆಂಗ್ಲ ಪದಗಳನ್ನೂ, ನುಡಿಗಟ್ಟುಗಳನ್ನೂ ಓದಿದ ಮೇಲಂತೂ, ಆಂಗ್ಲ ಭಾಷೆಯೇ ಈತನ ಅಣತಿಯ ಮೇರೆಗೆ ನಾಟ್ಯವಾಡುತ್ತಿದೆಯೇನೋ ಎಂಬಂತೆ ನನಗೆ ಭಾಸವಾಗಿದೆ . ಈತನ ಒಡನಾಟದಿಂದ ನನ್ನ ಆಂಗ್ಲ ಭಾಷೆಯ ಜ್ಞಾನ , ಕೊಂಚ ಮಟ್ಟಿಗಾದರೂ ವೃದ್ಧಿಸಿದೆ ಎಂದರೆ ತಪ್ಪಾಗಲಾರದು . ಆಂಗ್ಲ ಸಿನೆಮಾಗಳನ್ನು ನಾನು ಹೆಚ್ಚಾಗಿ ನೋಡಲು ಕೂಡ ಈತನೇ ನನಗೆ ಸ್ಪೂರ್ತಿ .


’ Jinkchak ನ  ಕರ್ತೃ ’ :

 Jinkchak : http://jinkchak.wordpress.com/ - ಎಂಬುದು ನಮ್ಮ ಕಾಲೇಜಿನಲ್ಲಿ ಅತಿ ಹೆಚ್ಚು ಪ್ರಚಲಿತವಾದ ಬ್ಲಾಗ್ ಗಳಲ್ಲಿ ಅಗ್ರ-ಪಂಕ್ತಿಯಲ್ಲಿದೆ . ಈ ಬ್ಲಾಗಿನಲ್ಲಿ ಹಾಸ್ಯ ಕಥೆಗಳು , ಕಾಲೇಜಿನಲ್ಲಿ ನಡೆಯುವ ಘಟನೆಗಳ ಹಾಸ್ಯಾತ್ಮಕ ಶೈಲಿಯ ವರ್ಣನೆ , ಪ್ರವಾಸ ಕಥನ , ತಂತ್ರಜ್ಞಾನ ವಿಷಯಗಳು  - ಇವೇ ಮೊದಲಾದವುಗಳನ್ನು ನಾವು ನೋಡಬಹುದು . ಸಣ್ಣ ಅಂಕಣದಿಂದ ಶುರುವಾದ ಈ ಬ್ಲಾಗ್ ಈಗ ಹೆಮ್ಮರವಾಗಿ ಬೆಳದಿದೆ . ಇದು ಹೆಚ್ಚೆಚ್ಚು ಪ್ರಚಲಿತವಾದಂತೆ , ಹುಡುಗರು ಇದರಲ್ಲಿ ಯಾವಾಗ ಹೊಸ ಆರ್ಟಿಕಲ್ ಬರುತ್ತದೋ ಎಂದು ಹಪ-ಹಪಿಸುತ್ತಿರುತ್ತಾರೆ. ಇಂತಹ ವೈಶಿಷ್ಟ್ಯ ಪೂರ್ಣ ಬ್ಲಾಗಿನ ಒಡೆಯನೂ ಸಹ ನಮ್ಮ ಕಥಾನಾಯಕನೇ !! ಇಷ್ಟಿದ್ದರೂ ಆತ ತನ್ನ ಹೆಸರಿನಲ್ಲಿ ಅಂಕಣಗಳನ್ನು ಬರೆಯದೆ , " Me ... yeah Me  " ಎಂಬ ಮಿಥ್ಯಾನಾಮದಿಂದ ( pseudonym ) ಬರೆಯುವುದು ವಾಢಿಕೆ .


' ಸಮೀರ್ ನ Recursive ನಗು ' :

ಈತನ ನಗುವೇ ಸುಪ್ರಸಿದ್ಧ  !!  "ಓ ... ಜೋರಾಗಿ ನಗುತ್ತಾನಲ್ಲಾ , ಅವನಾ ? ಗೊತ್ತು ಬಿಡು !! " ಎಂಬ ಮಾತುಗಳನ್ನು ಕೇಳಿದ್ದೇನೆ . ಈತ ನಗದೆ ಇರುವ ಸ್ಥಳಗಳಿಲ್ಲ - ಕ್ಲಾಸ್ ರೂಮ್ ನಿಂದ ಹಿಡಿದು ಕ್ಯಾಂಟೀನ್ ತನಕ ನಗುತ್ತಿರುತ್ತಾನೆ . ಈತ ನಗಲು ದೊಡ್ಡ-ದೊಡ್ಡ  ಕಾರಣಗಳು ಬೇಕಿಲ್ಲ . ಆತನೇ ಹೇಳುವ ಹಾಗೇ

"
Once I start laughing , it recursively stimulates me to laugh again and again !! It's very difficult to come out of this chain of recursive laughing calls !!

"
 ಈತನ ನಗುವೂ Recursion  ಪಾಲಿಸುತ್ತದ್ದಲ್ಲ  ಎಂಬುದೇ ಆಶ್ಚರ್ಯಕರ ಸಂಗತಿ . ಒಟ್ಟಿನಲ್ಲಿ ಈತನ ಪ್ರಭಾವದಿಂದ , ಇಡೀ ವಾತಾವರಣವೇ ಹಸನ್ಮುಖಿ ಆದಂತೆ ಗೋಚರಿಸುತ್ತದೆ .


’ ವಿದ್ಯಾ ದಧಾತಿ ವಿನಯಂ ’ :

ಹೆಚ್ಚೆಚ್ಚು ಕಲಿಯುತ್ತಾ ಹೋದಂತೆ , ಅಹಂಕಾರವು ತನ್ನ ಬೇರುಗಳನ್ನು ಬಿಟ್ಟು ಮುಂದೇ ಪೆಂಡಂಭೂತವಾಗಿ ಕಾಡಲಾರಂಭಿಸುತ್ತದೆ . ನಿಜವಾದ ವಿದ್ಯಾವಂತ " ವಿನಯತೆ ಇಲ್ಲದ ವಿದ್ಯೆ , ಹೆಣಕ್ಕೆ ಶೃಂಗಾರ ಮಾಡಿದಂತೆ " ಎಂಬುದನ್ನು ಅರಿತಿರುತ್ತಾನೆ . ನಮ್ಮ ಕಥಾನಾಯಕ ಕೂಡ "ನಿಜವಾದ ವಿದ್ಯಾವಂತ"ರ ಸಾಲಿನಲ್ಲಿ ನಿಂತು "Down to Earth" ಆಗಿರುತ್ತಾನೆ ಮತ್ತು ಈತನ ಸ್ಥಿತಪ್ರಜ್ಞತೆಯನ್ನು ಮೆಚ್ಚಲೇಬೇಕು . ಗೆದ್ದರೂ ಹೆಚ್ಚು ಭಾವೋದ್ರೇಕಗೊಳ್ಳದೇ, ಸೋತರೂ ಹೆಚ್ಚು ದುಃಖಿಸದೇ "Puff !! It's gone !!" ಎಂದು ಹೇಳಿ ಸುಮ್ಮನಾಗುತ್ತಾನೆ . ಇದು ಸಾಧನೆಯ ಪಥದಲ್ಲಿ ಹೆಚ್ಚು-ಹೆಚ್ಚು ಕ್ರಮಿಸಿರುವವರಲ್ಲಿ ಮಾತ್ರ ಕಾಣಬಹುದು !!  .



- ಒಟ್ಟಿನಲ್ಲಿ , ನಾನು ಕಂಡ ಬಹುಮುಖ ಪ್ರತಿಭೆ ಉಳ್ಳ ವ್ಯಕ್ತಿಗಳಲ್ಲಿ ಈತನೂ ಒಬ್ಬ . ಜೀವನಕ್ಕೆ ಬೇಕಾದ ಹಲವಾರು ಮೌಲ್ಯಗಳನ್ನು ಈತನಿಂದ ನಾನು ಕಲಿತ್ತಿದ್ದೇನೆ - ಮುಂದೆಯೂ ಕಲಿಯುತ್ತಿರುತ್ತೇನೆ .


ಸನ್ಮಾನ್ಯ ಡಿ.ವಿ.ಜಿ ಅವರು ಹೇಳಿರುವಂತೆ , "ಬದುಕು ಜಟಕಾಬಂಡಿ" ಇದ್ದ ಹಾಗೆ. ಈ ಜಟಕಾಬಂಡಿಯನ್ನು ಸಾಗಿಸುವಾಗ ( ಜೀವನದಲ್ಲಿ ) ನಾವು ತರಹ-ವಿಚಿತ್ರ ಜನರನ್ನು ಕಾಣುತ್ತೇವೆ . ಕೆಲವರನ್ನು ಸಹಜವಾಗಿ ಕಾಲಕ್ರಮೇಣ ಮರೆಯುತ್ತೇವೆ . ಇನ್ನೂ ಕೆಲವರು ತಮ್ಮ ವಿಶೇಷ ನಡತೆಗಳಿಂದ-ಜೀವನ ಶೈಲಿಗಳಿಂದ ಮರೆಯಲು ಅಸಾಧ್ಯರಾಗುತ್ತಾರೆ . ನಮ್ಮ ಕಥಾನಾಯಕ ನಿಸ್ಸಂದೇಹವಾಗಿ ಎರಡನೆಯ ಗುಂಪಿಗೆ ಸೇರಿದವನು .

 ಸಮೀರ್ ಮತ್ತು ನನ್ನ ನಡುವೆ ಹಲವಾರು ವಿಷಯಗಳಲ್ಲಿ ವಿಭಿನ್ನತೆ ಇದ್ದರೂ , "ಗೆಳೆತನ" ಎಂಬ ಸೂರಿನಡಿ ನಾವೆಲ್ಲರೂ ಆಶ್ರಯ ಪಡೆದವರೇ !! ಪರಸ್ಪರ ಸೌಹಾರ್ದತೆಯಿಂದ ಸ್ನೇಹದ ಕಡಲಲ್ಲಿ ಪಯಣಿಗರಾಗಿ ಸಾಗುತ್ತಿದ್ದೇವೆ ...  ಮುಂದೆಯೂ ಸಾಗುತ್ತಿರುತ್ತೇವೆ ಎಂಬ ಭರವಸೆ ನನಗಿದೆ .  


ಉಪಸಂಹಾರ : ಗೆಳೆಯ ಸಮೀರ್ ನ  ೨೦ನೇ ಜನುಮ ದಿನದಂದು ಏನಾದರು ಕೊಡಬೇಕೆಂದನಿಸಿತು . ಗೆಳೆಯನ ಮನೆಗೆ ನುಗ್ಗಿ ಕೇಕ್ ಕತ್ತರಿಸಿ ಮುಖಕ್ಕೆ ಕ್ರೀಮ್ ಬಳಿಯುವುದು , ಮುಖ ಪುಸ್ತಕದಲ್ಲಿ " Had an awesome day with chinnu ... Love ya ... Mwah ... !!  Munnu you missed it !!  " ಎಂದೆಲ್ಲಾ ಬರೆಯುವುದು - ಇಂತಹ ಒಳ್ಳೇ ಅಭ್ಯಾಸ ಯಾವುದೂ ನನಗೆ ತಿಳಿದಿಲ್ಲ . ಸರಿ , ಏನು ಮಾಡೋದು ಎಂದು ಆಲೊಚಿಸುತ್ತಾ ... ಮೈಕೊರೆಯುವ ಚಳಿಯಲ್ಲಿ ಬಿಸಿ-ಬಿಸಿ ಕಾಫಿ ಹೀರುತಲಿದ್ದೆ . ಆಗ , ಗೆಳೆಯನ ಬಗ್ಗೆ ಒಂದು ಕಿರು ಅಂಕಣವನ್ನು ಬರೆದು , ಆತನ ಜನುಮದಿನದ ನೆನಪಿನ ಕಾಣಿಕೆಯಾಗಿ ಯಾಕೆ ನೀಡಬಾರದು ಎಂಬ ಯೊಚನೆ ಥಟ್ ಅಂತ ಹೊಳೆಯಿತು. ಕಾಫಿ ಕೊಟ್ಟ ಐಡಿಯಾ ಗೆ ವಂದಿಸಿ ಮಿತ್ರನ ಬಗ್ಗೆ ನನಗೆ ತೋಚಿದ್ದನ್ನು ಗೀಚಲು  ಶುರುಮಾಡಿದೆ .....    






ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ !! ನಿನ್ನ ಆಸೆ-ಆಕಾಂಕ್ಷೆಗಳು ಈಡೇರಿ , ಈ ಪೈಪೋಟಿಯ ಬದುಕಿನ ಮಜಲುಗಳನ್ನು ಯಶಸ್ವಿಯಾಗಿ ದಾಟುತ್ತಾ , ನೆಮ್ಮದಿ ಕಾಣುತ್ತಾ , ಇನ್ನೂ ನೂರಾರು ವಸಂತಗಳನ್ನು ಕಾಣುವಂತಾಗಲಿ ಎಂದು  ಭಗವಂತನಲ್ಲಿ ಪ್ರಾರ್ಥಿಸುತ್ತೇನೆ  ....


ನಮಸ್ಕಾರಗಳೊಂದಿಗೆ ...