Thursday 25 August 2011

"ಗುಂಡೈಯ್ಯಂಗಾರಿಯ ಗೋಕುಲಾಷ್ಟಮಿ" ನಮ್ಮಲ್ಲಿ ವಿಚಾರ ಕ್ರಾಂತಿಯನ್ನು ಎಬ್ಬಿಸಲಿ !! :)

ರಜೇಗೆಂದು ಹೈದರಾಬಾದ್ ಗೆ ಹೋಗಿದ್ದ ಗುಂಡ, ಬೆಂಗಳೂರಿಗೆ ಹೊರಡುವ ರಾತ್ರಿಯ ರೈಲನ್ನು ಹತ್ತಿದ . ಗುಂಡ ವಿಶ್ಲೇಷಣಾ ಮನೊಭಾವ ಉಳ್ಳವನಾದ್ದರಿಂದ , ಆತ ರೈಲಿನಲ್ಲಿ ವಿವಿಧ ಸಹ ಪ್ರಯಾಣಿಕರನ್ನು ಗಮನಿಸುತ್ತ ಅವರ ಹಾವ-ಭಾವ-ಚಹರೆಯನ್ನು ದೃಷ್ಟಿಸುತ್ತ ಮನಸ್ಸಿನಲ್ಲಿಯೇ ಅವರ ಬಗ್ಗೆ ಲೆಕ್ಕಾಚಾರ ಹಾಕ ತೊಡಗಿದ . ಅಷ್ಟರಲ್ಲಿ  ಗುಂಡನ ಸಂಚಾರ ದೂರವಾಣಿಗೆ ಬಂದ ಒಂದು ಕಿರು ಸಂದೇಶ ಹೀಗಿತ್ತು " Wish You Happy Janmashtami In Advance ". ತಕ್ಷಣವೇ ಯಾರು ಕಳುಹಿಸಿದರು ಎಂಬುದನ್ನೂ ನೋಡದೇ ಗುಂಡ ಸಾರಾಸಗಟಾಗಿ ಬಂದ ನಂಬರಿಗೆ "Thank You .... Wish You The Same... " ಎಂಬ ಸಂದೇಶವನ್ನು ಕಳುಹಿಸಿಬಿಟ್ಟ . ಆದರೆ ಗುಂಡ ಕಳುಹಿಸಿದ ಮೆಸೇಜ್ ಪ್ರೀತಿ-ವಿಶ್ವಾಸದ ದ್ಯೋತಕವಾಗಿರಲಿಲ್ಲ, ಬದಲಿಗೆ " ರಿಪ್ಲೈ ಮಾಡಬೇಕಲ್ವ ?" ಎಂಬ ಶಾಸ್ತ್ರವನ್ನು ಬಲವಂತವಾಗಿ ಪಾಲಿಸುವುದರ ಪ್ರತೀಕವಾಗಿತ್ತು .

ಹೀಗೆ ಪ್ರಯಾಣ ಸಾಗುತಿತ್ತು . ಗುಂಡ ರೈಲಿನಲ್ಲಿ ಊಟ ಮುಗಿಸಿ  ಮಲಗುವ ತಯಾರಿ ನಡೆಸಿದ . ಅಷ್ಟರಲ್ಲಿ ಗುಂಡನ ದೂರವಾಣಿಗೆ ತನ್ನ ತಾಯಿಯಿಂದ ಒಂದು ಕರೆ ...

ತಾಯಿ-ಊಟ ಆಯ್ತ ? ಟ್ರೈನ್ ಎಲ್ಲಿದೆ ?
ಗುಂಡ- ಆಯಿತು .... ಟ್ರೈನ್ ಹೈದರಾಬಾದ್ ಬಿಟ್ಟು ಮುಕ್ಕಾಲು ಗಂಟೆ ಆಯಿತು ....
ತಾಯಿ - ಸರಿ , ನಾಳೆ ಗೋಕುಲಾಷ್ಟಮಿ !! ಮರೀಬೇಡ .... ಬೆಳಿಗ್ಗೆ ರೈಲ್ವೇ ಸ್ಟೇಷನ್ ನಿಂದ ಸೀದ ಮನೆಗೆ ಬಂದು ಸ್ನಾನ-ಸಂಧ್ಯಾವಂದನೆ ಮುಗಿಸಿ ... ಮನೆ ಮುಂದೆ ಮತ್ತು ದೇವರ ಮನೆಗೆ ಮಾವಿನ ಎಲೆ ಕಟ್ಟಬೇಕು  .
ಗುಂಡ- ಸರಿ ಮಾ .... ನಾಳೆ ಊಟಕ್ಕೆ ಏನು ಸ್ಪೆಷಲ್ಲು ?
ತಾಯಿ - ಮನೆಗೆ ಬಾ ... ಆಮೇಲೆ ಹೇಳ್ತೀನಿ . ಟ್ರೈನ್ ನಲ್ಲಿ ಪರ್ಸ್ ಹುಷಾರು ..... ಮಲಗಬೇಕಾದರೆ ಲಗ್ಗೆಜ್ ಅನ್ನು ಪಕ್ಕದಲ್ಲೇ ಇಟ್ಟುಕೋ ..... ಗುಡ್ ನೈಟ್ ...

ಗುಂಡ - ಅಯ್ಯೋ .... ಚಿಕ್ಕ ಮಕ್ಕಳಿಗೆ ಹೇಳುವ ತರಹ ಹೇಳುತ್ತಿದ್ದೀರಲ್ಲ ಮಾ ... Now I am "grown up" !!  ಗುಡ್ ನೈಟ್ ...


ಸೊಳ್ಳೆ-ತಿಗಣೆಗಳ ಕಾಟವೋ ಅಥವಾ ಗೊಕುಲಾಷ್ಟಮಿಯನ್ನು ನೆನಪಿಸಿದ  ಅಮ್ಮನ ಕರೆಯೋ ಗೊತ್ತಿಲ್ಲ - ಗುಂಡನಿಗೆ ನಿದ್ರಾ ದೇವಿ ಒಲಿಯಲಿಲ್ಲ , ಬದಲಿಗೆ ಗುಂಡ ಯೊಚನಾ ಲಹರಿಯಲ್ಲಿ ತೇಲಿ ಹೋದ.... ತನ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದ್ದ , ೧೦-೧೫ ವರ್ಷಗಳ ಹಿಂದಿನ ಕೃಷ್ಣ ಜನ್ಮಾಷ್ಟಮಿಯ ದಿನಗಳನ್ನು ನೆನಪಿಸಿಕೊಂದ .

ಆಗಿನ ಕೃಷ್ಣ ಜನ್ಮಾಷ್ಟಮಿಯ ದಿನಗಳಲ್ಲಿ ಗುಂಡ ಐಯ್ಯಂಗಾರಿಯ ಮನೆಯಲ್ಲಿ ಸಂಭ್ರಮವೋ-ಸಂಭ್ರಮ. ಹತ್ತಿರದ ದೂರದ ನೆಂಟರಿಷ್ಟರೂ ಸೇರಿದಂತೆ, ಹಲವಾರು ಮಂದಿ ಸಂಬಂಧಿಕರು  ಗುಂಡನ ತಾತನ ಮನೆಯಲ್ಲಿ ಸೇರಿರುತ್ತಿದ್ದರು . ಗುಂಡ ತನ್ನ ಅಕ್ಕಂದಿರೊಡನೆ, ಅಣ್ಣ-ತಮ್ಮಂದಿರೊಡನೆ ಹಬ್ಬದ ತಯಾರಿಯಲ್ಲಿ ತೊಡಗಿಸಿಕೊಳ್ಳೂತಿದ್ದ ಪರಿಯನ್ನು , ಇನ್ನೂ ಆತ ಮರೆತಿಲ್ಲ . ಶಾಲೆಗೆ ಚಕ್ಕರ್  ಹೊಡೆದು ( ರಜೇ ಕೊಡದೇ ಹೋದ ಸಂದರ್ಭದಲ್ಲಿ ) ಮನೆಯಲ್ಲಿ ಪಸರಿಸಿರುವ ಸಡಗರದ ವಾತಾವರಣಕ್ಕೆ ಸಾಕ್ಷಿಯಾಗಿರುತ್ತಿದ್ದ . ಎಂದಿನಂತೆ, ಅವತ್ತಿನ ದಿನವೂ ಅವನ ಅಜ್ಜಿಯೇ ಸ್ನಾನಾದಿ ಇತರೇ ನಿತ್ಯ ಕರ್ಮಗಳನ್ನು ಬೇಗ ಮುಗಿಸಿ ದೇವರಿಗೆ " ಶಿಟ್ರಮ್ ,ಶಿರುಗಾಲೈ ವಂದು ಉನ್ನೈ ಚೇವಿತ್ತು" ( ತಿರುಪ್ಪಾವೈ - ೨೯) ಎಂದು ಹಾಡಿ-ಹೊಗಳಿ ,ತಾತ ಮಾಡುವ ದೇವರ ಆರಾಧನೆಯ ಸಿದ್ಧತೆಯಲ್ಲಿ ಸಹಾಯ ಮಾಡುತ್ತಿದ್ದರು. ಅದೇ ಸಮಯಕ್ಕೆ ಮನೆಯ ಹೊರಾಂಗಣದಲ್ಲಿ ಮನೆಯ ಹೆಂಗಸರು ಬಣ್ಣ-ಬಣ್ಣದ ರಂಗವಲ್ಲಿಯನ್ನು ಅದ್ಭುತವಾಗಿಟ್ಟು ,ನೆರೆ-ಹೊರೆಯವರು ನಿಬ್ಬೆರಗಾಗುವಂತೆ ಮಾಡುತ್ತಿದ್ದರು .ಅಷ್ಟು ಹೊತ್ತಿಗೆ ತಾತನವರು ಸ್ನಾನ ಮುಗಿಸಿ ,ಹಣೆಯ ಮೇಲೆ "ಮೂರು ನಾಮವನ್ನು" ನಿಧಾನವಾಗಿ-ಜಾಣ್ಮೆಯಿಂದ ಇಟ್ಟುಕೊಳ್ಳುತ್ತಿದ್ದ ರೀತಿ ,ಗುಂಡನಿಗೆ ಆಶ್ಚರ್ಯದ ನಗು ತರಿಸುತ್ತಿತ್ತು . ಗುಂಡ ಮುಂತಾದ ಹುಡುಗರು ತಮ್ಮ ಸ್ನಾನಾದಿ ಕರ್ಮಗಳನ್ನು ಮುಗಿಸಿ ಸ್ಪರ್ಧಾತ್ಮಕವಾಗಿ ಮನೆಯ ಮುಂದೆ , ದೇವರ ಮನೆಗೆ ಹಚ್ಚ ಹಸಿರು ಮಾವಿನ ಎಲೆಗಳನ್ನು ಬೇಗ-ಬೇಗ ಕಟ್ಟಿ,ತಂದೆ-ತಾಯಿಯವರಲ್ಲಿ "ಭೇಷ್" ಎನಿಸಿಕೊಳ್ಳುವುದು ಅವರಿಗೆ ಅತಿ ಮುಖ್ಯವಾಗಿತ್ತು. ಅಷ್ಟರಲ್ಲಿ ಗುಂಡನ ತಾತನವರ ಆರಾಧನೆಯೂ ಮುಗಿದಿರುತ್ತಿತ್ತು .

ತಿಂಡಿಯ ನಂತರ ಕೃಷ್ಣನ ಮಂಟಪ ಕಟ್ಟುವುದಕ್ಕೆ ಸರ್ವರೂ ಸಂತೋಷದಿಂದ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಮಂಟಪಕ್ಕೆ  ,ಅಡುಗೆಗೆ ಬೆಕಾದ ಸಾಮಾನುಗಳನ್ನೂ ಮತ್ತು ಅವರಿಗೆ ಬೇಕಾದ ಇನ್ನಿತರ ಪದಾರ್ಥಗಳನ್ನೂ ಎಂದಿನಂತೆ (ಅಂದು-ಇಂದು-ಎಂದೆಂದು) "ಮಲ್ಲೇಶ್ವರಂ" ಒದಗಿಸುತ್ತಿತ್ತು .

ಕೆಲವು ಹಿರಿಯರ ಮುಂದಾಳತ್ವದಲ್ಲಿ, ಗುಂಡನೂ ಸೇರಿದಂತೆ ಹಲವಾರು ಪುಟಾಣಿ ಮಕ್ಕಳು ಚಾಕಚಕ್ಯತೆಯಿಂದ ಮಂಟಪದಲ್ಲಿ ಇಟ್ಟಿರುವ ಕೃಷ್ಣನ ವಿಗ್ರದ ಸುತ್ತಲೂ ಚಕ್ಕುಲಿ,ಮುಚ್ಚೇರು,ತೇಂಗೋಳ್,ರವೆ ಉಂಡೆ,ಪೊರಿ ಉಂಡೆ,ಕೊಬ್ಬರಿ ಮಿಟಾಯಿ ಮುಂತಾದ ತಿಂಡಿ ತಿನಸುಗಳನ್ನೂ ವಿವಿಧ ಹಣ್ಣುಗಳನ್ನೂ ದಾರದ ಸಹಾಯದಿಂದ ಕಟ್ಟುತ್ತಿದ್ದರು .ನಂತರ ಗುಂಡನ ತಂದೆಯವರು ಮಂಟಪವನ್ನು ಸಣ್ಣ ವಿದ್ಯುತ್ ಬಲ್ಬು ಗಳಿಂದ ಅಲಂಕರಿಸಲು-ಅದು ಮಂಟಪದ ಮೆರಗನ್ನು ಇಮ್ಮಡಿಗೊಳಿಸುತ್ತಿತ್ತು.ವಿದ್ಯುತ್ತಿನ ಸಹಾಯದಿಂದ, ಆ ಕೃಷ್ಣ ಮಂಟಪವು ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸುತ್ತಿತ್ತು. ಒಟ್ಟಿನಲ್ಲಿ ಆ ನಿರ್ಜೀವ ವಿಗ್ರಹಕ್ಕೆ " ಜೀವ ಬಂದಿದಿಯೆನೋ " ಎಂಬಂತೆ ಗೋಚರಿಸುತ್ತಿತ್ತು .ಇದನೆಲ್ಲಾ ಕಂಡ ಗುಂಡ ಮುಂತಾದ ಮಕ್ಕಳಿಗೆ ಎಲ್ಲಿಲ್ಲಿದ ಉತ್ಸಾಹ-ಆನಂದ .ನಂತರ ಮನೆಯ ಹಿರಿಯರು ಮಂಟಪದ ಆ "ಜೀವಂತ ಕೃಷ್ಣ"ನಿಗೆ ಪೂಜಾ ವಿಧಿ-ವಿಧಾನಗಳನ್ನು ಮುಗಿಸಿ,ಹೆಂಗಸರು ಕೃಷ್ಣನ ಸ್ತೊತ್ರಾವಳಿಗಳನ್ನೂ, ಕೃಷ್ಣನ ಹಾಡುಗಳನ್ನೂ ಹಾಡಿ, ರಾತ್ರಿಯ ಊಟಕ್ಕೆ ಆಣಿಗೊಳಿಸುತ್ತಿದ್ದರು .

ಗುಂಡಯ್ಯಂಗಾರಿಯ ಮನೆಯಲ್ಲಿ ಗೋಕುಲಾಷ್ಟಮಿಯ ರಾತ್ರಿಯ ಭೋಜನ ಬಲು ಜೋರಾಗಿರುತ್ತಿತ್ತು. ಸುಮಾರು ೧೫ ಮಂದಿ ನೆಂಟರು ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು . ಪುರೋಹಿತರ ಮನೆಯ ಮಗಳಾಗಿದ್ದ ಗುಂಡನ ಅಜ್ಜಿಯ ನೇತೃತ್ವದಲ್ಲಿ , ಮಡಿಯಿಂದ ಕೃಷ್ಣನಿಗೆ ಸಮರ್ಪಿತವಾಗಿದ್ದ ಎಲ್ಲ ಭಕ್ಷ್ಯ-ಭೋಜನಗಳು ಎಲೆಯ ಮೇಲೆ ಒಂದೊಂದಾಗಿ ಕಾಣಿಸಲಾರಂಭಿಸುತ್ತಿದ್ದವು . ಊಟದ ಮಧ್ಯೆ ತರಹ-ವಿಚಿತ್ರ ಚರ್ಚೆ . ಮಕ್ಕಳ ನಡುವೆ ನಡೆಯುತ್ತಿದ್ದ ವಾದದ ಬಿರುಸು ಹೆಚ್ಚಾದಾಗ ಕಾಣುತ್ತಿದ್ದ " ಪೋಡಾಡೈ ... !!" , " ಅಯ್ಯೋ ಪೋಡಿ ... " ಎಂಬ ಕೋಪದ ಮಾತುಗಳು . ಆಗ ದೊಡ್ಡವರು ಸಮಾಧಾನ ಪಡಿಸುತ್ತಿದ್ದ ರೀತಿ ಯಾವುದನ್ನೂ ಗುಂಡ ಮರೆತಿಲ್ಲ . ಹೀಗೆ ಕೊಳಕಟ್ಟೇ ( ಕನ್ನಡಲ್ಲಿ ಮೋದಕ ಅಂತ ಕೆಲವರು ಕರೆಯುತ್ತಾರೆ .... ಎಷ್ಟು ಸರಿಯೋ ನನಗೆ ಗೊತ್ತಿಲ್ಲ ),ಪಾಯಸ,ಅಪ್ಪಮ್ ಮುಂತಾದ ಸಿಹಿ ಪದಾರ್ಥಗಳನ್ನೊಳಗೊಂಡ ಊಟದ ಕಡೆಯ ಹಂತಕ್ಕೆ , ಅಂದರೇ ಅನ್ನ-ಮೊಸರು ಬಡಿಸುವ ಮೊದಲೇ ಹಲವಾರು ಮಂದಿ "Bold" ಆಗಿರುತ್ತಿದ್ದರು . ಒಮ್ಮೆ ಹೀಗೆ, ಗುಂಡ ಊಟ ಹೆಚ್ಚಾಗಿ ಮಧ್ಯೆ ಎದ್ದು ಹೋಗುವ ಪ್ರಯತ್ನ ಮಾಡಿದಾಗ .... ಗುಂಡನ ಮಾವನವರು ( ಗುಂಡನ ತಾತನವರ ಕಡೆಗೆ ಕೈ ತೋರಿಸುತ್ತ ) " ದೊಡ್ಡವರು ಊಟ ಮುಗಿಸಿ ಏಳುವವರೆಗೂ ,ಚಿಕ್ಕವರಾದ ನಾವು ಏಳುವಂತಿಲ್ಲ !! ತಿಳಿಯಿತೇ ? " ಎಂದು ಹೇಳಿರುವ ಬುದ್ಧಿಮಾತನ್ನೂ ಗುಂಡ ಮರೆತಿರುವುದಕ್ಕೆ ಸಾಧ್ಯವಿಲ್ಲ . ಊಟದ ನಂತರ ಹಿರಿಯರು ಎಲೆ-ಅಡಿಕೆ ಹಾಕಿ ,ಸಂಪ್ರದಾಯದ ಮಾತುಗಳನ್ನು ಆಡಿ, ಮಂಟಪದ ಕೃಷ್ಣನಿಗೆ ಪುನಃ ವಂದಿಸಿ ,ಪರಸ್ಪರ ಬೀಳ್ಕೊಡುತ್ತಿದ್ದರು . ಹೀಗೆ , ಗುಂಡನ ಮನೆಯ ಪ್ರತಿಯೊಬ್ಬರು " ಮುಂದಿನ ಜನ್ಮಾಷ್ಟಮಿ ಯಾವಾಗ ಬರುತ್ತದೋ ?" ಎಂದು ಕಾತುರದಿಂದ ಕಾಯುವಂತೆ ಮಾಡುತ್ತಿತ್ತು ಅಂದಿನ ಜನ್ಮಾಷ್ಟಮಿ. ಇದಕೆಲ್ಲಾ ಅಂದು ಸುರಿಯುತ್ತಿದ "ರೋಹಿಣಿ ಮಳೆ"ಯೇ ಸಾಕ್ಷಿಯಾಗಿರುತ್ತಿತ್ತು .( ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಂದು ಎಂಬುದು ಜನರಲ್ಲಿರುವ ಒಂದು ನಂಬಿಕೆ ) 

ಹೀಗೆ ರೈಲಿನಲ್ಲಿ ಯೋಚಿಸುತ್ತಾ ಗುಂಡ ನಿದ್ರಾಪರವಶನಾದ .ಬೆಳಿಗ್ಗೆ ರೈಲು ಬೆಂಗಳೂರಿಗೆ ಬಂದ ತಕ್ಷಣ ಅಮ್ಮನ ಆಣತಿಯಂತೆ ಸೀದಾ ಮನೆಗೆ ಬಂದ. ಸ್ನಾನಾದಿ ಕರ್ಮಗಳನ್ನು ಮುಗಿಸಿ ಮನೆಯ ಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಮಾವಿನ ಎಲೆಗಳನ್ನು "ತಾಯಿಯ ಬಲವಂತದ ಮೇರೆಗೆ" ಕಟ್ಟುತ್ತಾ ,ಹಿಂದಿನ ರಾತ್ರಿ ರೈಲಿನಲ್ಲಿ ಯೋಚಿಸಿದ್ದ ೧೦-೧೫ ವರ್ಷದ ಹಿಂದಿನ ಜನ್ಮಾಷ್ಟಮಿ ಹಬ್ಬದ ಸಡಗರವನ್ನು ಪುನಃ ನೆನಪಿಸಿಕೊಂಡು ಆಗಿರುವ ಬದಲಾವಣೆಗಳನ್ನು ಗಮನಿಸಿದ .


ಅಂದೂ ಹಿರಿಯರು ಲವಲವಿಕೆ ಇಂದ ಇರುತ್ತಿದ್ದರು. ಇಂದೂ ಕೂಡ ಗುಂಡನ ಅಜ್ಜಿ "ಎಂದೈ ತಂದೈ ತಂದೈ ,ತಂದೈ ತಮ್ಮೂತ್ತಪ್ಪನ್ ,ಏಳ್ಪಡಿಗಾಲ್ ತೊಡಂಗಿ ವಂದು ವಳಿವಳಿಯಾಯಿ ಚೇಹಿನ್ರೋಮ್ " ( ತಿರುಪಲ್ಲಾಂಡು - ೬) ಎಂಬ ಮಾತಿನಲ್ಲಿ ಅಡಗಿರುವ ಭಕ್ತಿಯಂತೆ ಈಗಲೂ ಕೃಷ್ಣನಿಗೆ ಮಡಿಯಿಂದ ಭಕ್ಶ್ಯ-ಭೋಜನಗಳನ್ನು ಸಿದ್ಧಪಡಿಸುತ್ತಿದ್ದಾರೆ . ಗುಂಡನ ತಾತ ಈ ಇಳಿ ವಯಸ್ಸಿನಲ್ಲೂ ಪೂಜೆ ಸಲಿಸುತ್ತಿದ್ದಾರೆ. ಆದರೆ, ಅಂದು ಇದ್ದ ಸಂಭ್ರಮದ ವಾತಾವರಣ ಇಂದು ಏಕೋ ಗುಂಡನಿಗೆ ಕಾಣುತ್ತಿಲ್ಲವಂತೆ . ಗುಂಡನ ಅಣ್ಣ-ಅಕ್ಕಂದಿರಿಗೆ ಅವರದೇ ಸಂಸಾರದ ತಾಪತ್ರಯಗಳು,ಆಫೀಸಿನ ಅಡಚಣೆಗಳು - ಇವೇ ಮುಂತಾಂದವುಗಳು ದೊಡ್ಡ ಕೆಲಸವೆಂದು ಪರಿಣಮಿಸಿರುವಾಗ , ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಅವರಿಗೆ ಒಂದು ದಿನ ರಜೇ ಬೇಕೆ ಹೊರತು , ಗುಂಡನ ಮನೆಯಲ್ಲಿ ಸೇರಿ "ಕೃಷ್ಣ ಮಂಟಪ"ವನ್ನು ಕಟ್ಟಿ,ಭೋಜನದಲ್ಲಿ ಪಾಲ್ಗೊಳ್ಳುವುದು ದೂರದ ಮಾತು .


 ( ಅಂದು ಹಿರಿಯರು ತಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೇ , ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದರು ?  ) 

ಹಾಗಾದರೇ, ಹದಿನೈದು ವರ್ಷದ ಹಿಂದಿನ ಗುಂಡನಿಗೂ ಈಗಿರುವ ಗುಂಡನಿಗೂ ಬದಲಾವಣೆ ಆಗಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ನನ್ನ ಸರಳ ಉತ್ತರ " ಖಂಡಿತ ... ಬದಲಾಗಿದ್ದಾನೆ". ಆಗ 'ಪುಟಾಣಿ ಗುಂಡ'ನಿಗೆ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆ ಮತ್ತು ಉತ್ಸುಕತೆ ಇರುತ್ತಿತ್ತು . ಆದರೆ ಈಗಿನ 'ಪದವಿ ಓದುತ್ತಿರುವ ಗುಂಡ'ನಿಗೆ ತನ್ನ ಕೆಲಸಗಳು ಮಾತ್ರ "Cool and Interesting " ಮತ್ತು ಇನ್ನಿತರೇ ಕೆಲಸಗಳು " Quite Boring " ಎಂಬ ಮನಸ್ಥಿತಿಯನ್ನು ತಾಳಿದ್ದಾನೆ. ಸಂಸ್ಕೃತಿ ಉಳಿಸಿ ಸಂಪ್ರದಾಯವನ್ನು ಪಾಲಿಸುವುದು ತನ್ನ ಬೌದ್ಧಿಕ ಬೆಳವಣಿಗೆಗೆ ಅಗೌರವ ಸೂಚಿಸಿದಂತೆ ಎಂಬ ತಪ್ಪು ವಾದಕ್ಕೆ ಅಂಟಿಕೊಂಡಿದ್ದಾನೆ .


ಹಾಗಾಗಿ ಅಂದು ಆತನಿಗೆ ಹಚ್ಚ-ಹಸಿರುಗಳಿಂದ ಕಂಗೊಳಿಸುತ್ತಿದ್ದ ಆ ಮಾವಿನ ಎಲೆಗಳು,ಇಂದು ಕೇವಲ ನಿರ್ಜೀವ ಎಲೆಗಳಾಗಿ ಕಾಣುತ್ತಿವೆ.ಅಂದು ಉತ್ಸುಕತೆಯಿಂದ ಕೂಡಿರುತ್ತಿದ್ದ ಮಂಟಪದ ಕೆಲಸ, ಇಂದು "Some Shit !!" ಎಂದು ಕಡೆಗಣಿಸಿ ಆ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾನೆ.ಅಂದು ನೆಂಟರ ನಡುವೆ ಇರುವ ಭಾಂಧವ್ಯತೆಯ ಸಂಕೇತವಾಗಿದ್ದ ಜನ್ಮಾಷ್ಟಮಿಯು , ಇಂದು ಕೇವಲ ಒಂದು ರಜಾ ದಿನಕ್ಕೆ ಸೀಮಿತವಾಗಿದೆ. ಇವತ್ತಿನ ಈ ಗುಂಡನ ಪರಿಸ್ಥಿತಿಗೂ ಆ ಮಳೆಯೇ ಸಾಕ್ಷಿ .ಅಂದು  ಗುಂಡನಿಗೆ ಜನ್ಮಾಷ್ಟಮಿಯ ಆ ಮಳೆ ಮುದ ತರಿಸುತ್ತಿತ್ತು . ಆದರೆ ಇಂದು ಅದು " Stupid And Useless Rain " ಆಗಿ ಗೊಚರಿಸುತ್ತಿದೆ .


- ಹೀಗೆ ಗುಂಡನ ಇಂದಿನ ಜನ್ಮಾಷ್ಟಮಿಯು ಸ್ವಾರಸ್ಯವಿಲ್ಲದೇ ಸಾಧಾರಣವಾಗಿ ಸಾಗಿತು .


ಕಡೆಯ ಮಾತು : ಇಲ್ಲಿ "ಗುಂಡೈಯ್ಯಂಗಾರಿ" ಮತ್ತು "ಜನ್ಮಾಷ್ಟಮಿ"( ಕೆಲವು ಕಡೆ ಗೊಕುಲಾಷ್ಟಮಿ ಎಂದು ಬಳಸಿರಬಹುದು) ಎಂಬುದು, ನನ್ನನ್ನೂ ಒಳಗೊಂಡ ಈಗಿನ ಯುವಕ-ಯುವತಿಯರ ಮತ್ತು ಭವ್ಯ ಸಂಸ್ಕೃತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಅಷ್ಟೆ .ಇದೂ ಯಾರದೇ ವೈಯುಕ್ತಿಕ ವಿಚಾರಗಳಿಗೆ ಸೀಮಿತವಲ್ಲ. ನಮ್ಮ ಕಥಾ ನಾಯಕ ಗುಂಡನ ಕೆಲವು ಗುಣಗಳಾದರೂ ಈಗಿನ ಪ್ರತಿಯೊಬ್ಬ ಯುವಕ-ಯುವತಿಯರಲ್ಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾಣಬಹುದು ಎಂಬುದು ನನ್ನ ಅಭಿಪ್ರಾಯ . ಹೀಗೆ ಈ ದೃಷ್ಟಾಂತದ ಸಾರವನ್ನು ತಿಳಿದ ನಂತರ ನಮ್ಮ ಮನಸ್ಸಿನಲ್ಲಿ , " ಇದೆಲ್ಲವೂ ಗುಂಡನ ( ಗುಂಡ ಈಗಿನ ಆಧುನಿಕ ಯುವಕ-ಯುವತಿಯರನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ಮರೆಯಬಾರದು ) ತಪ್ಪೇ ?" ," ಇವೆಲ್ಲಾ ನಮ್ಮ ಆಧುನಿಕ ಯುವಕ-ಯುವತಿಯರ ವಯೋ ಸಹಜ ಧರ್ಮವೇ ಎಂದು ನಿರ್ಲಕ್ಷಿಸಬಹುದೇ ? ಹಾಗೆ ನಿರ್ಲಕ್ಷಿಸಿದರೆ ನಮ್ಮ ಭವ್ಯ ಸಂಸ್ಕೃತಿಗೆ ಬೆಲೆಯೇ ಇಲ್ಲವೇ ? " , " ಗುಂಡನೇ ಮೊದಲಾದ ಯುವಕ-ಯುವತಿಯರ ಜೀವನದಲ್ಲಿ ಹೆಚ್ಚಾದ ತಾಂತ್ರಿಕತೆ ಅವರನ್ನು ಜೀವನದ ಇತರೇ ಆಯಾಮದ ಕಡೆಗೆ ಒಂದು ಗೋಡೆಯನ್ನು ನಿರ್ಮಿಸಿ, ಯಾಂತ್ರಿಕ ಬದುಕನ್ನು ಸಾಗಿಸಲು ಪ್ರೇರೇಪಿಸುತ್ತಿದಿಯೇ ? " ," ಪಾಶ್ಚಾತ್ಯರನ್ನು ಸಂಪೂರ್ಣವಾಗಿ ಅನುಕರಿಸಲು ಹೋಗಿ ನಾವು ದಾರಿ ತಪ್ಪುತ್ತಿದ್ದೇವೆಯೇ ?" , ಅಥವಾ " ಇವೆಲವನ್ನೂ ತಿಳಿದು ALL IZZ WELL ಎಂದು ಸುಮ್ಮನೆ ಕೂರುವುದು ಸಮಂಜಸವೇ ?" - ಇವೇ ಮೊದಲಾದ ಪ್ರಶ್ನೆಗಳು ನಮ್ಮ ಯುವಕ-ಯುವತಿಯರಲ್ಲಿ ಉದ್ಭವಿಸಿ , ಅವರಲ್ಲಿ "ವಿಚಾರ ಕ್ರಾಂತಿ"ಯನ್ನು ಎಬ್ಬಿಸುವಂತಾಗಲಿ ಎಂಬುದೇ ನನ್ನ ಈ ಅಂಕಣದ ಸದುದ್ದೇಶ .... 

ನಮಸ್ಕಾರಗಳೊಂದಿಗೆ ....

( ಮುಕ್ತ ಚರ್ಚೆಗೆ ಸ್ವಾಗತ )