Sunday 29 January 2012

"ಕರ್ವಾಲೊ" - ಒಬ್ಬ ವಿಜ್ಞಾನಿ ಕಾಲಜ್ಞಾನಿ ಆಗಿ ರೂಪುಗೊಳ್ಳುವ ಅಚ್ಚರಿಯ ಕಥೆ !




ಬಹಳ ವರುಷಗಳ ಹಿಂದೆ ನಮ್ಮ ತಂದೆಯವರು ನನ್ನೊಡನೆ ಯಾವುದೋ ವಿಚಾರವಾಗಿ ಚರ್ಚಿಸುತ್ತಾ " ನೋಡಯ್ಯ .. ತೇಜಸ್ವಿಯವರು ಕುವೆಂಪು ಅವರ ಮಗನಾದರೂ , ತಮ್ಮ ತಂದೆಯವರ ಪ್ರಭಾವವನ್ನು ಉಪಯೋಗಿಸದೇ , ಯಾರದೇ ಕೃಪಾಕಟಾಕ್ಷಗಳಿಗೆ ಪಾತ್ರರಾಗದೇ ತಮ್ಮದೇ ಆದ ಒಂದು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ . ಅವರು ಬರೆದಿರುವ ಪುಸ್ತಕಗಳನ್ನು  ಬಿಡುವಿದ್ದಾಗ ಓದು .... ಬಹಳ ಸೊಗಸಾಗಿರುತ್ತದೆ " ಎಂದು ಹೇಳಿದ್ದರು . ಹೀಗೆಯೇ ಬಹಳ ಮಂದಿ ಶ್ರೀಯುತ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಲು ನನಗೆ ಸಲಹೆ ನೀಡುತ್ತಲೇ ಬಂದಿದ್ದರು . 

ಮೂಲತಃ , ಶ್ರೀಯುತ ಗೊ.ರಾ.ಅಯ್ಯಂಗಾರ್ ರ ಲಲಿತ ಪ್ರಭಂಧಗಳನ್ನೂ,ಹಾಸ್ಯ-ಪುಸ್ತಕಗಳನ್ನು ಓದುತ್ತಿದ್ದ ನಾನು , "ಪ್ರಕೃತಿಯ ನಿಯಮವೇ ಬದಲಾವಣೆ" ಎಂಬ ಮಾತಿನಂತೆ , ಇತ್ತೀಚೆಗೆ ತೇಜಸ್ವಿ ಅವರ ಪುಸ್ತಗಳನ್ನು ಓದಲು ಶುರು ಮಾಡಿದೆ ! ಅದರಂತೆ ಅವರ "ಕರ್ವಾಲೊ" ಎಂಬ ಪುಸ್ತಕವನ್ನು ಓದಿ ಮುಗಿಸಿದೆ . ಓದಿ ಮುಗಿಸುತ್ತಿದಂತೆಯೇ ನನ್ನಲ್ಲಿ ಆದ ಒಂದು ಬಗೆಯ ರೋಮಾಂಚನ ಅನಿರ್ವಚನೀಯ ! ಹಾಗೆಯೇ ನನ್ನಲ್ಲಿ ಒಳ ಹೊಕ್ಕು ಕುಳಿತಿರುವ ಒಬ್ಬ ತಾತ್ವಿಕ ಚಿಂತಕ ನನ್ನಲ್ಲಿ ಹಲವಾರು ವಿಚಿತ್ರ-ವಿಶಿಷ್ಟ ಪ್ರಶ್ನೆಗಳನ್ನು ಕೇಳ ತೊಡಗಿದ . ನನ್ನಲ್ಲಿ ನೆಲೆಸಿರುವ ವಿಜ್ಞಾನದ ವಿದ್ಯಾರ್ಥಿ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯದ ಬಗೆಗೆ ತರಹ-ವಿಚಿತ್ರ ಪ್ರಶ್ನೆಗಳನ್ನು ವ್ಯಕ್ತಪಡಿಸತೊಡಗಿದ ! 

ಹಾಗಿದ್ದರೆ , ಯಾರು ಈ 'ಕರ್ವಾಲೊ' ? ಏಕೆ ಈ ಪುಸ್ತಕ ಅಷ್ಟು ಪ್ರಶಂಸನೀಯ ?

ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ . ಹಳ್ಳಿಯ ಮಂದಣ್ಣ , ಪ್ರಭಾಕರ , ಎಂಗ್ಟ , ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ ! ಧರ್ಮ,ಧ್ಯಾನ,ತಪಸ್ಯೆಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲಾ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನವಾದ ಕೃತಿ ! 

ಎಲ್ಲಾ ಕಥೆ-ಕಾದಂಬರಿಗಳಂತೆ ,ಲೇಖಕರು ತಮ್ಮ ಜವಾಬ್ದಾರಿಯನ್ನು  ಕೇವಲ "ನಾಟಕೀಯ ವಿವರಣೆ"ಗೆ ಸೀಮಿತಗೊಳಿಸದೆ , ಇಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲಿಯೂ , ಸಾಹಸ-ಪ್ರಸಂಗಗಳಲ್ಲಿಯೂ , ತತ್ವ-ಚಿಂತನೆಗಳಲ್ಲಿಯೂ ಸ್ವತಃ ಪಾತ್ರವನ್ನು ವಹಿಸಿ ತಮ್ಮ ಅನುಭವವನ್ನು ವಿವರಿಸಿದಂತಿದೆ . 

"ಕರ್ವಾಲೊ" ಕಥೆ ಮೂಡುಗೆರೆಯ 'ಜೇನು ಸೊಸೈಟಿ'ಯಲ್ಲಿ ಪ್ರಾರಂಭವಾಗುತ್ತದೆ .  ಮೊದಲಿಗೆ ಮಂದಣ್ಣ , ಲಕ್ಷ್ಮಣ , 'ಸಾಬಿ' ಪ್ಯಾರ , ಸ್ಪಾನಿಯಲ್ ನಾಯಿ 'ಕಿವಿ' ಮುಂತಾದವರನ್ನು  ಒಡಗೂಡಿ , ಲೇಖಕರು  ಜೇನು ಹುಳುಗಳಲ್ಲೇ ಇರುವ ಅನೇಕ ವಿಧವನ್ನು ಪರಿಚಯಿಸುತ್ತಾ , ಅವುಗಳ ಆಹಾರಾಭ್ಯಾಸದ  ವಿಚಾರವನ್ನೂ , ಗೂಡು ಕಟ್ಟುವ ವಿಧಾನವನ್ನೂ , ಜೇನು ಹಲ್ಲೆ ಕಟ್ಟುವ ಪರಿಯನ್ನೂ , ಅದರಿಂದ ಜೇನು ಹೊರತೆಗೆಯುವ ರೀತಿಯುನ್ನೂ ಅನೇಕ ದೃಷ್ಟಾಂತಗಳ ಮೂಲಕ ಸೊಗಸಾಗಿ ತಮ್ಮದೇ ಶೈಲಿಯಲ್ಲಿ  ವಿವರಿಸುತ್ತಾ ನಮ್ಮನ್ನು ಜೇನುಗಳ ವಿಸ್ಮಯಾಲೋಕಕ್ಕೆ ಕರೆದೊಯ್ಯುತ್ತಾರೆ ! ನಂತರ ಲೇಖಕರಿಗೆ , ಬಹಳ ಪ್ರಸಿದ್ಧ  ಸಸ್ಯವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞರಾದ 'ಕರ್ವಾಲೊ' ಅವರ ಪರಿಚಯವಾಗುತ್ತದೆ . ಆ ವೇಳೆಗಾಗಲೇ ಕರ್ವಾಲೊ , 'ಹಳ್ಳಿ ಗಮಾರ' ಮಂದಣ್ಣ ತೋರಿಸಿದ  "Glow Worm " ಎಂಬ ವಿಚಿತ್ರ ಹುಳುವಿನ ಅಧ್ಯಯನದಲ್ಲಿ ತೊಡಗಿರುತ್ತಾರೆ .

" ಈ ಹುಳುವನ್ನು ಇಷ್ಟರವರೆಗೆ ಯಾರೂ ಕಂಡಿರಲಿಲ್ಲ . ಭಾರತದಿಂದ ಇದೆ ಮೊದಲ ಬಾರಿಗೆ ರಿಪೋರ್ಟ್ ಆಗ್ತಿರೋದು . ಈ ಹುಳುವಿನ ಬಾಲದಲ್ಲಿ ಎರಡು ದೀಪಗಳಿವೆ .... ನೋಡಿದ್ರಾ ...  ಅದಕ್ಕೇನಾದರೂ ಅಪಾಯದ ಸೂಚನೆ ಬಂದರೆ ಸಾಕು ವೈರಿಗಳನ್ನು ಹೆದರಿಸಿ ಓಡಿಸಲು ಅದರ ಬಾಲದ ಕಡೆಯಿಂದ ನೀಲಿಯ ಬೆಳಕನ್ನು ಚೆಲ್ಲುವ ಆ ಎರಡು ದೀಪಗಳು ಹತ್ತಿಕೊಳ್ಳುತ್ತದೆ "  - ಇವೆ ಮೊದಲಾದ "Glow Worm"ನ ವರ್ಣನೆಯನ್ನು  ಕರ್ವಾಲೊ ಅವರಿಂದ ಕೇಳುತ್ತಲೇ ಲೇಖಕರು ( ಓದುಗರೂ ) ಮೂಕವಿಸ್ಮಿತರಾಗುತ್ತಾರೆ ! 

ಹೀಗೆ 'ಕರ್ವಾಲೊ'ವಿನ ಕಥೆ ನಮ್ಮ ಜ್ಞಾನ ಭಂಡಾರವನ್ನು ವೃಧಿಸುತ್ತಾ ಸಾಗುತ್ತಿರಬೇಕಾದರೆ.....  ಒಮ್ಮೆ ಕರ್ವಾಲೊ ಸಾಹೇಬರು ಲೇಖಕರಿಗೆ  , ಮಂದಣ್ಣನು " ಹಾರುವ ಓತಿ " ( Flying Lizard ) ಒಂದನ್ನು ಕಾಡಿನಲ್ಲಿ ನೋಡಿದ್ದಾನೆಂದೂ ,  ಇದು ಸ್ಥೂಲವಾಗಿ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನದು ಮತ್ತು ಸರ್ವರೂ ಅದು ನಿಃಶೇಷವಾಗಿದೆಂದು ನಂಬಿದ್ದಾರೆ  ಮತ್ತು ಇದರ ಒಂದು ಮಿಂಚು ನೋಟ ಸಿಕ್ಕರೂ ಸಾಕೆಂದು ಜಗತ್ತಿನಾದ್ಯಂತ ವಿಜ್ಞಾನಿಗಳು ತಮ್ಮ ಕಾಲ,ಜೀವನ,ಹಣ ಎಲವನ್ನೂ ಮುಡುಪಾಗಿಟ್ಟುಕೊಂಡು ಹಂಬಲಿಸುತ್ತಿದ್ದಾರೆಂದೂ ತಿಳಿಸುತ್ತಾರೆ . ಇಂತಹ , ಇಡಿಯ ಜಗತ್ತೇ ಬೆಚ್ಚಿಬೀಳುವಂಥಹ ಸಮಾಚಾರವನ್ನು ಹೊರ ಪ್ರಪಂಚಕ್ಕೆ ತಿಳಿಸುವ ಮೊದಲು ತಾವೊಮ್ಮೆ ಸ್ವತಃ  ನೋಡಿಬರಬೇಕೆಂದು ಕಾಡಿಗೆ ಹೊರಡುವ ತಯಾರಿಯಲ್ಲಿ ಇದ್ದೇವೆ , ನೀವು ಕೂಡ ಬನ್ನಿ ಎಂದು ಲೇಖಕರನ್ನು ಆಹ್ವಾನಿಸುತ್ತಾರೆ !

ಅದರಂತೆ ಕರ್ವಾಲೊ , ಲೇಖಕರು , ಮಂದಣ್ಣ , 'ಫೋಟೊಗ್ರಾಫರ್ ' ಪ್ರಭಾಕರ , 'ಬಿರಿಯಾನಿ' ಕರಿಯಪ್ಪ , ಸ್ಪಾನಿಯಲ್ ನಾಯಿ 'ಕಿವಿ' , ದಾರಿಯಲ್ಲಿ ಸಿಗುವ ಎಂಗ್ಟ - ಮಲೆನಾಡಿನ ದಟ್ಟವಾದ ಕಾಡಿನಲ್ಲಿ ಬಂದೊದಗುವ  ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ , ಆ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನ 'ಹಾರುವ ಓತಿಯ'ನ್ನು  ಅರಸುತ್ತ ಸಾಗುವುದೇ ಈ ಕಥೆಯ ಜೀವಾಳ  ! 

ಕಾಡಿನಲ್ಲಿ ಅವರ ನಡುವೆ ನಡೆಯುವ ಚರ್ಚೆ-ಸಂಭಾಷಣೆಗಳು , ತಾತ್ವಿಕ-ಚಿಂತನೆಗಳು , ಅಲ್ಲಿ ನಡೆಯುವ ವೈಜ್ಞಾನಿಕ ಆವಿಷ್ಕಾರ ಈ ಕೃತಿಯ ಮತ್ತು ರಚಿಸಿದ ಲೇಖಕರ ಪ್ರಭುದ್ಧತೆಗೆ ಕೈಗನ್ನಡಿಯಂತಿದೆ !

ಅವರು ತಮ್ಮ ಸಾಹಸ-ಕಾರ್ಯದಲ್ಲಿ ಯಶಸ್ವಿಯಾದರೇ ? ಅರ್ಥಾತ್, ಅವರು ಹಾರುವ-ಓತಿಯನ್ನು ಹಿಡಿಯಲು ಮಾಡುವ ಪ್ರಯತ್ನದಲ್ಲಿ ಜಯಗಳಿಸಿದರೇ ? ಅಥವಾ ಅವರ ಶ್ರಮ ವ್ಯರ್ಥವಾಯಿತೇ  ? - ಎಂಬುದೆಲ್ಲಾ ಕಡೇಗೆ ಅಪ್ರಸ್ತುತವಾಗುತ್ತದೆ  !

ಏಕೆಂದರೆ ಲೇಖಕರು "ಹಾರುವ ಓತಿ"ಯ ಮಹತ್ವವನ್ನು ಕೇವಲ ಸಾಹಸೀತನಕ್ಕೆ ಸೀಮಿತಗೊಳಿಸಿರುವುದಿಲ್ಲ ! ಬದಲಿಗೆ ಅದು ಜೀವ-ವಿಕಾಸದಲ್ಲಿ,ಕಾಲದ ಅನಂತತೆಯಲ್ಲಿ , ಸತ್ಯದ ಅನ್ವೇಷಣೆಯಲ್ಲಿರುವ ಪ್ರತಿಯೊಬ್ಬರಲ್ಲಿಯೂ ಆಲೋಚನೆ,ಕನಸುಗಳನ್ನು ಪ್ರಚೋದಿಸುವ ಸಾಂಕೇತಿಕ ರೂಪವಾಗಿ ಚಿತ್ರಿಸಿದ್ದಾರೆ ಎಂಬುದು ನನ್ನ ಭಾವನೆ ! ಆ ನಿಟ್ಟಿನಲ್ಲಿ ಲೇಖಕರು ಬಹು-ಪಾಲು ಯಶಸ್ವಿಯಾಗಿ ,ನಮಲ್ಲಿ , ಸನ್ಮಾನ್ಯ ಡಿ.ವಿ.ಜಿ ಅವರ ಮಾತಿನಂತೆ 

ಏನು ಜೀವನದರ್ಥ? ಏನು ಪ್ರಪಂಚಾರ್ಥ? ।
ಏನು ಜೀವಪ್ರಪಂಚಗಳ ಸಂಬಂಧ? ॥
ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? ।
ಜ್ಞಾನಪ್ರಮಾಣವೇಂ? – ಮಂಕುತಿಮ್ಮ 


ಜೀವನ ಎಂದರೇನು ? ಪ್ರಪಂಚ ಎಂದರೇನು ?
ಈ ಜೀವ-ಪ್ರಪಂಚಗಳ ಸಂಬಂಧವಾದರೂ ಎಂತಹುದು ?
ನಾವು ಕಾಣದೇ ಇರುವುದಾವುದಾದರೂ ಉಂಟೇ ? ಹಾಗೆ ಇದ್ದರೇ , ಯಾವುದದು ?
ಕೇವಲ ಜೀವಿಯ ಜ್ಞಾನ ಅದರ ಅಸ್ತಿತ್ವ  - ಅದರ ಅಸ್ತಿತ್ವ ಇಲ್ಲದಿರುವುದಕ್ಕೆ ಸಾಕ್ಷಿಯೇ ? - ಮಂಕುತಿಮ್ಮ 

- ಇವೇ ಮೊದಲಾದ ತಾರ್ಕಿಕ-ತಾತ್ವಿಕ ಚಿಂತನ-ಮಂಥನಗಳಿಗೆ ನಾಂದಿ ಹಾಡುತ್ತಾರೆ ! 

ಪಠ್ಯಕ್ಕೇ ಸೀಮಿತಗೊಳಿಸಿ, ಪಠ್ಯ-ಪುಸ್ತಕದ ಆಚೆಗೆ ಯೊಚನೆ ಮಾಡಲೂ ಪ್ರಚೊದಿಸದ  ಈಗಿನ ಶೈಕ್ಷಣಿಕ ಪದ್ಧತಿ ಒಂದೆಡೆಯಾದರೆ , "ಕರ್ವಾಲೋ" ಅಂತಹ ಸೃಜನಾತ್ಮಕ , ಚಿಂತನ-ಮಂಥನಗಳಿಗೆ ಸ್ಪೂರ್ತಿಯಾಗಿರುವ ಕೃತಿ ಮತ್ತೊಂದೆಡೆ !

ಇಂತಹ ಕೃತಿ ಕನ್ನಡದಲ್ಲಿ ರಚಿತವಾಗಿದೆ ಎಂಬುದು ಇನ್ನೊಂದು ಹೆಮ್ಮೆಯ ವಿಷಯ. ಇತ್ತೀಚೆಗೆ ನಾನು , ನನ್ನ "ಸಂಸ್ಕೃತ ಪ್ರೇಮಿ" ತಮ್ಮನೊಡನೆ ಯಾವುದೋ ವಿಷಯವಾಗಿ ಚರ್ಚಿಸುತ್ತಿದ್ದಾಗ ... ಆತ " ಅಯ್ಯೋ ! ನಿಮ್ಮ ಕನ್ನಡ ಸಾಹಿತ್ಯ ಬಿಡಯ್ಯ ...  'ABCD  ನಾ .. ಆಲೂ  ಗೆಡ್ಡೆ  ನಾ .. ಗೋಡೆ  ಹಲ್ಲಿ  ನಾ .. ಯಾವನಿಗ್  ಗೊತ್ತು ? ' ಅಂತ ಸಿನಿಮಾ ಹಾಡು ಬರ್ಯೋದಕ್ಕೆ ಸೀಮಿತ  ! " ಎಂದು ಗೇಲಿ ಮಾಡಿದ . ದುರದೃಷ್ಟಕರ ಸಂಗತಿ ಎಂದರೆ ಈತನ ಹಾಗೆ ಹಲವಾರು ಮಂದಿ ಕನ್ನಡ ಸಾಹಿತ್ಯದ ಅರಿವೇ ಇಲ್ಲದೇ , ಈಗಿನ "ಅರ್ಥ-ರಹಿತ" ಸಿನಿಮಾ ಸಾಹಿತ್ಯವನ್ನು ಅಸ್ತ್ರವಾಗಿಸಿಕೊಂಡು , " ಕನ್ನಡದಲ್ಲಿ ಏನಿದೆ ?" " ಕನ್ನಡ-ಸಾಹಿತ್ಯಕ್ಕೆ ಬೆಲೆ ಏನಿದೆ ? " ಎಂದು ಟೀಕಿಸುತ್ತಿರುವವರನ್ನು ನಾವು ನೋಡಬಹುದು . ಅಂತಹವರು "ಕರ್ವಾಲೊ" ಪುಸ್ತಕವನ್ನು ಒಮ್ಮೆ ಅಧ್ಯಯನ ಮಾಡಿದ ನಂತರ ಆ ಮಾತುಗಳನ್ನು ಖಂಡಿತ ಹೇಳಲಾರರು ಎಂಬುದು ನನ್ನ ನಂಬುಗೆ .

ಒಟ್ಟಿನಲ್ಲಿ , ಶ್ರೀಯುತ ತೇಜಸ್ವಿ ಅವರ "ಕರ್ವಾಲೊ" ಸರ್ವಕಾಲಕ್ಕೂ  ಅನ್ವಯಿಸುವಂತಹ ಮತ್ತು ಸರ್ವರೂ ಓದಿ ತಿಳಿಯಬೇಕಾದಂತಹ ಅಭೂತಪೂರ್ವ ಕೃತಿ . ಇಂತಹ ಸೃಜನಾತ್ಮಕ ಕೃತಿಗಳು ಕನ್ನಡದಲ್ಲಿ ಇನ್ನು ಹೆಚ್ಚು-ಹೆಚ್ಚು ಬರುವಂತಾಗಲಿ !

ನಮಸ್ಕಾರಗಳೊಂದಿಗೆ ...