Tuesday 24 April 2012

ನಾಯಂಡಹಳ್ಳಿ- ಒಂದು ಲಲಿತ ಪ್ರಬಂಧ


ನಾಯಂಡಹಳ್ಳಿ ಬೆಂಗಳೂರಿನಿಂದ  ಮೈಸೂರಿಗೆ ಹೋಗುವ ದಾರಿಯಲ್ಲಿರುವ ಪ್ರಮುಖ ಜಂಕ್ಷನ್ ಗಳಲ್ಲಿ ಒಂದು , ಎಂದು ಸಂಕ್ಷಿಪ್ತವಾಗಿ ಹೇಳಿ ಮುಗಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ .


ಈ ಮಾರ್ಗವಾಗಿ ಸಂಚರಿಸುವ ಪ್ರತಿಯೊಬ್ಬರಿಗೂ , ನಾಯಂಡಹಳ್ಳಿ ತನ್ನ 'ಟ್ರಾಫಿಕ್ ಜಾಮ್' , 'ಸಿಗ್ನಲ್' ಗಳ ರುಚಿಯನ್ನು ಖಂಡಿತ ತೋರಿಸಿರುತ್ತದೆ. ಇದಕ್ಕೆ ಬಸ್ಸು,ಲಾರಿ,ಕಾರು,ಆಟೋ ,ದ್ವಿಚಾಕ್ರ ವಾಹನ,ಆಂಬುಲೆನ್ಸ್,ಶವ ಹೊರುವ ಗಾಡಿ ಎಂಬಿತ್ಯಾದಿ ಯಾವುದೇ ವಿನಾಯ್ತಿಗಳಿಲ್ಲ . "ನಾಯಂಡಹಳ್ಳಿ"ಯನ್ನು ಹಾದು ಹೋಗುವ ಪ್ರತಿಯೊಬ್ಬರೂ ತನಗೆ ಗೌರವ ಸೂಚಿಸುವಂತವರಾಗಿ 'ಕೆಲ ಘಳಿಗೆ' ನಿಂತು, ತಲೆ ಬಾಗಿ ತಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದು ಅದು ಇಚ್ಚಿಸುತ್ತದೇನೋ - ಎಂಬಂತೆ ನನಗೆ ಭಾಸವಾಗಿದೆ . ಆದರೆ ಈ 'ಕೆಲ ಘಳಿಗೆ' ಎಷ್ಟೆಂಬುದನ್ನು ನಾವು ಹುಲು ಮಾನವರು ನಿರ್ಧಾರ ಮಾಡುವಂತದಲ್ಲ . ಸ್ವತಃ "ನಾಯಂಡಹಳ್ಳಿ ಅಧಿಪತಿ"ಯೇ ತನ್ನ "ಮೂಡ್"ಗೆ ಅನುಗುಣವಾಗಿ ಅದನ್ನು ವಿಧಿಸುತ್ತಾನೆ . ಅವನ "ಮೂಡ್" ಈಗ ಇದ್ದಂತೆ ಮತ್ತೊಂದು ಘಂಟೆಯಲ್ಲಿರುವುದಿಲ್ಲ ! ಅದರಂತೆ, ಅಲ್ಲಿರುವ 'ಟ್ರಾಫಿಕ್ ಸ್ಟೇಟಸ್ ' ಸದಾ ಬದಲಾವಣೆಗೆ ಒಳಪಟ್ಟಿರುತ್ತದೆ . ಈ ನನ್ನ ಕಲ್ಪನಾ-ಲಹರಿ ಗೆ ಇಂಬು ಕೊಡುವಂತೆ , ಅದೇ ಮಾರ್ಗವಾಗಿ ಸಂಚರಿಸುವ ನನ್ನ ಮಿತ್ರರು ಕೆಲವೊಮ್ಮೆ ಆಡುವ ಮಾತುಗಳು ಉಲ್ಲೇಖನೀಯ -

" ನಾನು ೮.೩೦ ರ ಸುಮಾರಿಗೆ ನಾಯಂಡಹಳ್ಳಿಗೆ ಬಂದಾಗ , ಯಾವುದೇ ಟ್ರಾಫಿಕ್ ಜಾಮ್ ಇರ್ಲಿಲ್ವಲ್ಲಾ ! ನೀವು ೮.೪೫ ರ ಸುಮಾರಿಗೆ ಬಂದಾಗ ಅದು ಹೇಗೆ ಅಷ್ಟು ಟ್ರಾಫಿಕ್ ಜಾಮ್ ಆಯಿತು ? " .



ಇಲ್ಲಿ ,ನಾವು ಕನಿಷ್ಟವೆಂದರೂ ಸುಮಾರು ೧೦ ನಿಮಿಷ , ಆ 'ವೃಷಭಾವತಿ ತೀರ'ದಲ್ಲಿ ,ಆ ಕೊಳಚೆ ನೀರಿನಿಂದ ಬರುವ 'ಪರಿಮಳವನ್ನೂ' ಆಸ್ವಾದಿಸುತ್ತಾ ,ವಾಹನಗಳು ಹೊರಸೂಸುವ ಹೊಗೆಯ 'ಕಂಪನ್ನೂ' ಸವಿಯುತ್ತಾ , ಮತ್ತೂ ಬೇಸಿಗೆಯಾದರೆ ಸೂರ್ಯನ 'ವಿಶ್ವರೂಪ ದರ್ಶನ'ವನ್ನೂ ಪಡೆಯುತ್ತಾ ನಮ್ಮ ವಾಹನಗಳಲ್ಲೋ,ಬುಸ್ಸುಗಳಲ್ಲಿಯೋ ಕಾಯಬೇಕಾಗುತ್ತದೆ . ಇಲ್ಲಿನ ಗರಿಷ್ಟ ಕಾಯುವಿಕೆಯ ಸಮಯದ ಬಗ್ಗೆ ತಿಳಿಸುವಷ್ಟು ನಾನು ಶಕ್ತನಲ್ಲ . ಇಲ್ಲಿ ನಾವು ಮುಕ್ಕಾಲಿಂದ ಒಂದು ಘಂಟೆ ಕಾದದ್ದು ಉಂಟು . ಒಟ್ಟಿನಲ್ಲಿ, ನಮ್ಮ ಈ ಕರುಣಾಜನಕ ಸ್ಥಿತಿಯನ್ನು ಕಂಡು " ನಾಯಂಡಹಳ್ಳಿ ಮಹಾರಾಜ"ನಿಗೆ ಮರುಕ ಹುಟ್ಟಿದರೆ ಮಾತ್ರ ಸಿಗ್ನಲ್ಲು ಗಳು , ಟ್ರಾಫಿಕ್ ಜಾಮ್ ಗಳು 'ಕ್ಲಿಯರ್' ಆಗುತ್ತವೆ .ಇಲ್ಲದಿದ್ದರೆ ಇಲ್ಲ !



ಈ ನಾಯಂಡಹಳ್ಳಿಯ ಪರಾಕ್ರಮವನ್ನು ಅರಿಯದ ಅನೇಕ ಮಂದಿ ಪೊಲೀಸರು ಟ್ರಾಫಿಕ್ ಅನ್ನು ತಮ್ಮ ಹಿಡಿತಕ್ಕೆ ತರಲು ಶತಾಯ-ಗತಾಯ ಪ್ರಯತ್ನಿಸುವುದು , ಅವರ ಪ್ರಯತ್ನದಲ್ಲಿ ವಿಫಲರಾಗುವುದು - ಇಲ್ಲಿ ಸರ್ವೇಸಾಮಾನ್ಯ .


ಇಂತಹ ನಾಯಂಡಹಳ್ಳಿಯ ಐಂದ್ರಜಾಲಿಕ ಬಲೆಯಿಂದ ತಪ್ಪಿಸಿಕೊಂಡು- ಅರ್ಥಾತ್ ಒಂದು ಸಿಗ್ನಲಿನಲ್ಲೂ ನಿಲ್ಲದೇ "ವಾಹನಗಳ ಸಮುದ್ರವನ್ನು" ಸುಲಭವಾಗಿ ದಾಟಿ ತಮ್ಮ-ತಮ್ಮ ದಡವನ್ನು ಸೇರುವವರು ಅಂದಿನ ದಿನ ಬಹಳ ಅದೃಷ್ಟವಂತರೇ ಸರಿ ! ಅವರನ್ನು ನೋಡಿ ನಮ್ಮ ಮಹಾರಾಜನು ತನ್ನ ಸಹಜವಾದ ರಾಕ್ಷಸ ನಗೆಯನ್ನು ಬೀರುತ್ತಾ " ಇಂದು ನಿನ್ನ ಗ್ರಹ-ಗತಿಗಳು ಸರಿಯಾಗಿದ್ದವು ... ತಪ್ಪಿಸಿಕೊಂಡೆ ... ಇಂದು ಹೋಗು ... ನಾಳೆ ನೋಡಿ-ಕೊಳ್ಳು(ಲ್ಲು)ತ್ತೇನೆ " ಎಂದು ಹೇಳಿದಂತೆ ತೋರುತ್ತದೆ .


ಅದೃಷ್ಟ ಸದಾ ಒಂದು 'ಬಡ್ಡಿ ಮಗ' ನಾಗಿ ಪರಿಣಮಿಸುವ ನನಗೆ ; ಇಲ್ಲಿನ ೩-೪ ಸಿಗ್ನಲ್ಲು ಗಳ ಬಲೆಯಲ್ಲಿ ಸಿಲುಕಿರುವುದೂ ಉಂಟು . ಮಿಗಿಲಾಗಿ, ಒಮ್ಮೆ ನಾನು ನಮ್ಮ ಮಹಾರಾಜನ ಅವಕೃಪೆಗೆ ಪಾತ್ರವಾಗಿ , ಈ ವಾಹನ ದಟ್ಟಣೆಯಲ್ಲಿ ಸಿಲುಕಿ "ಅಲ್ಗೊರಿಥಮ್ಸ್" ಕಿರು ಪರೀಕ್ಷೆಗೆ ತಡವಾಗಿ ಹಾಜರಾಗಿ ಕೆಲವೇ-ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಯಿತು - ಇಂತಹ ಘಟನೆಗಳನ್ನು ನೆನಪಿಸಿಕೊಂಡರೆ ನಮ್ಮ ಮಹಾರಾಜ ಎಂಥವರಿಗೂ ನೀರಿಳಿಸಬಿಡಬಲ್ಲ ಎಂಬ ತೀರ್ಪಿಗೆ ಬರಬಹುದು .



ನಾಯಂಡಹಳ್ಳಿ ಮಹಾರಾಜನ ಪರಾಕ್ರಮವನ್ನು ತಿಳಿದ ನಮ್ಮಂತಹ ಹಲವರು ಒಂದು ಅನಧಿಕೃತ ದುಂಡು-ಮೇಜಿನ ಸಭೆಯನ್ನು ಕರೆದಿದ್ದೆವು . ಸಭೆಯಲ್ಲಿ ತೆಗೆದುಕೊಂಡ ಒಂದು ಪ್ರಮುಖ ನಿರ್ಧಾರವೆಂದರೆ- ನಮ್ಮ ಸಮಯವನ್ನು ಇನ್ನು ಮೇಲೆ "ಇಂಡಿಯನ್ ಸ್ಟಾಂಡರ್ಡ್ ಟೈಮ್"ನಿಂದ  "ನಾಯಂಡಹಳ್ಳಿ ಸ್ಟಾಂಡರ್ಡ್ ಟೈಮ್" ಗೆ ಬದಲಿಸುವುದು . ಇತ್ತೀಚೆಗೆ ಈ ಮಾರ್ಗವಾಗಿ ಸಂಚರಿಸುವ ಹೆಚ್ಚಿನವರು "ನಾಯಂಡಹಳ್ಳಿ ಸ್ಟಾಂಡರ್ಡ್ ಟೈಮ್ " ಅನ್ನು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ . ಮತ್ತೂ ನಮ್ಮ ಕಾಲೇಜುಗಳಲ್ಲಿ , ಹಲವಾರು ಕಛೇರಿಗಳಲ್ಲಿ ನಾವು ತಡವಾಗಿ ಬಂದಿದಕ್ಕೆ ಕಾರಣ ಕೇಳಿದಾಗ ಕೇವಲ " ನಾಯಂಡಹಳ್ಳಿ" ಎಂದು ಉತ್ತರಿಸಿದರೂ ಸಾಕು - ನಮ್ಮ ಪ್ರೊಫೆಸರ್ ಗಳು ,ಬಾಸ್ ಗಳು "ಮಹಾರಾಜನ ಪರಾಕ್ರಮ"ವನ್ನು ಅರಿತು ಮುಂದೆ ಮಾತು ಬೆಳೆಸಲು ಹಿಂಜರಿಯುತ್ತಾರೆ .



ನಾಯಂಡಹಳ್ಳಿ , ತನ್ನ ಮೂಲಕ ಹಾದು ಹೋಗುವವರ ಜೀವನದಲ್ಲಿ ಹಲವು ಪಾತ್ರವನ್ನು ವಹಿಸುತ್ತಿದೆ . ಕೆಲವರಿಗೆ ಇದು ಮಾರ್ಗ ಬದಲಿಸುವ ಜಂಕ್ಷನ್ . ಕಾಲೇಜಿಗೆ ಹೋಗುವ ಪಡ್ಡೆ ಹುಡುಗರಿಗೆ , ಇಲ್ಲಿ ರೂಟ್ ಬದಲಿಸುವ ತಮ್ಮ ಪ್ರೇಯಸಿಗಾಗಿ ಕಾಯಬೇಕಾದ ನಿಲ್ದಾಣ . ಬಸ್ಸಿನಲ್ಲಿ ಕೆಲವು ವಯಸ್ಕರು 'ಸಿಗ್ನಲ್ ಕಾಯುವಿಕೆ'ಯ ನೋವನ್ನು ನೀಗಿಸಲು ಅಕ್ಕ-ಪಕ್ಕದವರೊಡನೆ ಲೋಕಾಭಿರಾಮವಾಗಿ ಚರ್ಚೆ ಶುರು ಮಾಡುವ ಶುಭ ಸ್ಥಳ . ಬಸ್ಸಿನ ನಿರ್ವಾಹಕನಿಗೆ ಎಲ್ಲರ ಬಳಿಯೂ ಟಿಕೆಟೋ -ಪಾಸೋ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಲು ಮುಂದೆ-ಹಿಂದೆ ಪರೇಡ್ ಪ್ರಾರಂಭಿಸುವುದೂ ಇಲ್ಲಿಯೇ ! ಇತರೇ ವಾಹನಗಳಿಗೆ , ತಾವು "ಎಷ್ಟು ನಿಧಾನವಾಗಿ ಓದಿಸಬಲ್ಲೆವು ? " ಮತ್ತು " ತಮ್ಮ ಕೊಂಬು ( ಹಾರ್ನ್ ) ಎಷ್ಟು ಗರಿಷ್ಟ ಶಬ್ದ ಉತ್ಪಾದನೆ ಮಾಡಬಹುದು ?" - ಇವೇ ಮುಂತಾದ ಜ್ಞಾನೋದಯವಾಗುವ ಪ್ರದೇಶ ! ಪಾದಚಾರಿಗಳಿಗೆ , ಒಮ್ಮೆ ದೇವರನ್ನು ನೆನೆದು , ಉಸಿರನ್ನು ಬಿಗಿ ಹಿಡಿದುಕೊಂಡು , ಮಾನವ ಪ್ರಕೃತಿಗೆ ಕೊಟ್ಟ "ವಾಯು-ಶಬ್ದ ಮಾಲಿನ್ಯ" ಎಂಬ ಉಡುಗೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ , ಅತ್ತ -ಇತ್ತ ಸುಮಾರು ೫-೧೦ ಬಾರಿ ಕತ್ತು ಆಡಿಸಿ , ಭಗವಂತ ತಮಗೆ ಇತ್ತ ಕಾಲುಗಳಲ್ಲೇ ಅಲ್ಲಿನ ಕೊಳಚೆ ಪ್ರದೆಶವನ್ನೂ , ವಾಹನಗಳ ಸಮುದ್ರವನ್ನೂ ಈಜಿ ತಮ್ಮ-ತಮ್ಮ ದಡ ಸೇರುವ ವಿಸ್ಮಯಕಾರಿ ಪ್ರದೇಶ . ಇನ್ನೊಂದು ಭರವಸೆಯ ಮಾತೇನೆಂದರೆ , ಕೆಲವರು ವಾಹನಗಳ ಸಹವಾಸವೇ ಬೇಡವೆಂದು ಕಾಲ್ನಡಿಗೆಯಲ್ಲೇ "ಟ್ರಾಫಿಕ್ ಜ್ಯಾಮ್" ಅನ್ನು ಬೆಳಿಗ್ಗೆ-ಸಂಜೆ ದಾಟುವವರಿಗೆ ಯಾವುದೇ ಡಯಟಿಂಗ್ ನ ಅವಶ್ಯಕತೆ ಬೀಳುವುದಿಲ್ಲ . ಬೆವರು ಇಳಿಸಿ-ತೂಕ ಕಡಿಮೆ ಮಾಡುವ ಉಚಿತ ಸೇವೆಯನ್ನು ನಾಯಂಡಹಳ್ಳಿ ನಡೆಸುತ್ತಿದೆ .




ಇತರರಿಗೆ ನಾಯಂಡಹಳ್ಳಿ ಹೇಗಾದರೂ ಪರಿಣಮಿಸಲಿ . ನನಗಂತೂ ರಾ.ವಿ ಕಾಲೇಜ್ ಎಂಬ ಯಮಲೋಕಕ್ಕೆ ಪ್ರತಿ ನಿತ್ಯ ಹೋಗಲು , ದಾಟಲೇಬೇಕಾದ ವೈತರಣಿ ನದಿಯ ಸದೃಶ ! ಹಾಗೂ, ಇಲ್ಲಿನ ಜನ-ಜಂಗುಳಿ , ಅಸಂಖ್ಯಾತ ವಾಹನಗಳ ಓಡಾಟ - ಅವುಗಳಿಂದಾಗುವ ಸಂಚಾರ ದಟ್ಟಣೆ , ಆಗುತ್ತಿರುವ ಶಬ್ದ-ವಾಯು ಮಾಲಿನ್ಯ - ಇವುಗಳ್ಳೆಲ್ಲವನ್ನೂ ಎಷ್ಟು ಶಾಂತ ಚಿತ್ತದಿಂದ ಸಹಿಸುತ್ತಿರುವ ಭೂತಾಯಿಯನ್ನು "ಕ್ಷಮಯಾ ಧರಿತ್ರಿ" ಎಂಬುದಾಗಿ ಸ್ತುತಿಸುತ್ತಾರೇಕೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಕಂಡುಕೊಂಡಿದ್ದೇನೆ !



ನಾಯಂಡಹಳ್ಳಿಯಲ್ಲಿ "ಕುಡುಕನ ಶಾಪ" :



ಬಸ್ಸು ಎಂಬುದು ಕೇವಲ ನಮ್ಮನ್ನು ಗಮ್ಯಸ್ಥಾನಕ್ಕೆ ಸೇರಿಸುವ ಒಂದು ಮಾನವ ನಿರ್ಮಿತ ವಾಹನವೆಂದು ನನಗೆ ಅನಿಸುವುದಿಲ್ಲ . ಬದಲಿಗೆ , ಯಾವುದೇ ಮಾನವ ನಿರ್ಮಿತ ಬೇಧಗಳಿಲ್ಲದೇ , ವಿವಿಧ ರೀತಿಯ ಜನರ , ಅವರ ಸಂಸ್ಕೃತಿ-ಸಂಪ್ರದಾಯಗಳ ,ಆಚಾರ-ವಿಚಾರಗಳ ,ವೇಷ-ಭೂಷಣಗಳ ಸಮಾಗಮ ಕ್ಷೇತ್ರ . ಒಂದು ತರಹದ 'ಪುಟಾಣಿ ಜಗತ್ತೇ' ಸರಿ ! ಇಲ್ಲಿ - ಕೆಲವು ಸಹಪ್ರಯಾಣಿಕರೊಡನೆ ಉಭಯ ಕುಶಲೋಪರಿ ನಡೆಯಬಹುದು , ಯಾವುದೋ ವಿಚಾರವಾಗಿ ಲೋಕಾಭಿರಾಮವಾಗಿ ಚರ್ಚಿಸಲೂಬಹುದು , ಕೆಲವರ ಹಾವ-ಭಾವವೇ ನಮಗೆ ನಗೆ ತರಿಸಬಹುದು , ಇನ್ನೂ ಕೆಲವರ ರೀತಿ-ರಿವಾಜುಗಳು ನಮ್ಮಲ್ಲಿ ಆಶ್ಚರ್ಯ ಹುಟ್ಟಿಸಬಹುದು , ಮತ್ತೂ ಕೆಲವರ ಚರ್ಯೆ ನಮಗೆ ಅಸಹ್ಯಕರವಾಗಿರಬಹುದು . ಇಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಸ್ಮೃತಿ-ಪಟಲದಲ್ಲಿ ಉಳಿಯಬಹುದು , ಇನ್ನೂ ಕೆಲವು ಘಟನೆಗಳು ದೇವರು ನಮಗಿತ್ತ ವರವಾದ ಮರೆವಿನ ದೆಸೆಯಿಂದ ಕಣ್ಮರೆಯಾಗಲೂಬಹುದು . ಒಟ್ಟಿನಲ್ಲಿ , ಬಸ್ಸಿನ ಪ್ರಯಾಣ ತನ್ನದೇ ಆದ "ವಾವ್ ಫ್ಯಾಕ್ಟರ್ " ಅನ್ನು ಹೊಂದಿರುತ್ತದೆ . ಈ ಬಸ್ಸೆಂಬ "ಕಿರು ಬ್ರಹ್ಮಾಂಡ"ದಲ್ಲಿ ನಾನೂ ಸಾಕಷ್ಟು ಜನರೊಡನೆ ಸಂಭಾಷಣೆ ನಡೆಸಿರುತ್ತೇನೆ , ಕೆಲವು ಉಭಯ-ಕುಶಲೋಪರಿಗೆ ಸೀಮಿತವಾಗಿರಬಹುದು ; ಮತ್ತೂ ಕೆಲವು ಸುದೀರ್ಘ ಚರ್ಚೆಯಾಗಿ ಮಾರ್ಪಾಡಾಗಿರಬಹುದು . ಇಲ್ಲಿ ನಡೆದ ಕೆಲವು ವಿಚಿತ್ರ ಘಟನಾವಳಿಗಳಿಗೂ ನಾನು ಸಾಕ್ಷಿಯಾಗಿರುತ್ತೇನೆ .



ಅದರಂತೆ , ಮೊನ್ನೆ ನಾನು ಬಸ್ಸಿನಲ್ಲಿ ಕಾಲೇಜಿಗೆ ಹೋಗುವಾಗ , ನಾಯಂಡಹಳ್ಳಿಯಲ್ಲಿ ( ನಮ್ಮ ಮಹಾರಾಜನ ವರಪ್ರಸಾದದಿಂದಾಗಿ ) ಒಬ್ಬ 'ವಯಸ್ಕ ಕುಡುಕ'ನೊಡನೆ ಮಾತುಕತೆಯಾಯಿತು . ಆದರೆ , ಇದಕ್ಕೂ ಮುಂಚೆ , ಕೆಲವಾರು ಬಾರಿ , ಬಸ್ಸಿನಲ್ಲಿರುವ ಕುಡುಕರು ನನ್ನನ್ನು ಸಂಭಾಷಣೆಗೆ ಎಳೆದಿದ್ದಾರೆ . ಈ ಕುಡುಕರು , ಬಸ್ಸಿನಲ್ಲಿರುವ ಇತರರನ್ನು ಬಿಟ್ಟು ನನ್ನನ್ನೇ ಏಕೆ ಮಾತಿಗೆ ಎಳೆಯುತ್ತಾರೆ ? ಎಂಬ ಪ್ರಶ್ನೆಗೆ ಉತ್ತರ ದೊರೆಯದೇ ನಮ್ಮ ಹಲವಾರು ಮಿತ್ರರನ್ನು ಕೇಳಿದ್ದೇನೆ . ಅದಕ್ಕೆ ಹೆಚ್ಚಿನವರು ನನ್ನ ಗಡ್ಡದ ಕಡೆಗೆ ಕೈ ತೋರಿಸಿದ್ದಾರೆ . ಅದು ನಿಜವಿರಲೂಬಹುದೆಂದು ಕೆಲವೊಮ್ಮೆ ನನಗನಿಸಿದೆ . ಏಕೆಂದರೆ , ನಾನು ಗಡ್ಡ ಬಿಟ್ಟಾಗ, ಶ್ರೀ ಶರತ್ ಚಂದ್ರ ಚಟ್ಟೋಪಾಧ್ಯಾಯರವರ "ದೇವದಾಸ್" ಕಾದಂಬರಿಯಲ್ಲಿ ಬರುವ ; ಪಾರೋ ಸಿಗದೇ , ದಿಗ್ಬ್ರಾಂತನಾಗಿ , ಎಲ್ಲವನ್ನೂ ಪರಿತ್ಯಜಿಸಿ, ಕುಡಿತಕ್ಕೆ ಶರಣಾದ "ದೇವದಾಸ್" ನ ಮುಖ-ಲಕ್ಷಣಗಳು ನನ್ನಲ್ಲಿ ಎದ್ದು ಕಾಣುತ್ತದಂತೆ . ಮಿಗಿಲಾಗಿ , ಕುಡುಕರನೇಕರು 'ದೇವದಾಸ್'ನನ್ನೇ ತಮ್ಮ ದಳಪತಿಯೆಂದೋ ಅಥವಾ ತಮ್ಮ ಪ್ರತಿನಿಧಿಯೆಂದೋ ಭಾವಿಸಿರಬಹುದು .ಹಾಗಾಗಿ , ನನ್ನ ಮತ್ತು ಆ "ದೇವದಾಸ್"ನ ನಡುವೇ ಯಾವುದೇ ಸಾಮ್ಯ ಗುಣಗಳು ಇಲ್ಲದಿದ್ದರೂ, ಕೇವಲ ನನ್ನ "ಗಡ್ಡ"ದ ವರಪ್ರಸಾದದಿಂದಾಗಿ - ಹೀಗೆ ಕೆಲವಾರು ಬಾರಿ ನನ್ನ ಮತ್ತು ಕುಡುಕರ ನಡುವೆ ಕುಶಲೋಪರಿ-ಸಾಂಪ್ರತಗಳು ನಡೆಯುತ್ತದೆಂದು ಮಿತ್ರರನೇಕರ ಅಭಿಪ್ರಾಯವಾಗಿದೆ . ಅದು ಹೇಗೂ ಇರಲಿ ! 



ನನಗೆ ಗಾಂಧೀಯವರ - " ಕುಡಿತ ದೇಹವನ್ನೇ ನಾಶ ಮಾಡುತ್ತದೆ " ಎಂಬ ಘೋಷ-ವಾಕ್ಯದಲ್ಲಿ ನಂಬಿಕೆಯಿದ್ದರೂ , ಕುಡುಕರ ಮೇಲೆ ಕರುಣೆ ,ಅನುಕಂಪ ಬರಲು ಕಾರಣ ಶ್ರೀ.ಜಿ.ಪಿ.ರಾಜರತ್ನಂರವರ "ರತ್ನನ ಪದಗಳು" ಎಂಬ ಕೃತಿಯಲ್ಲಿ ಬರುವ 


"
ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!
"

- ಇವೇ ಮೊದಲಾದ ಪದ್ಯಗಳು . ರತ್ನನ ಪದಗಳಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲವನ್ನೂ ಸ್ಪಷ್ಟವಾಗಿ ಚಿತ್ರಿಸಿದ್ದಾರೆ.


[


ಇತ್ತೀಚೆಗೆ , ನಮ್ಮ ಅಕ್ಕನವರ ಪುಟಾಣಿ ಮಗಳ ಬಾಯಿಂದ " ರೊಟ್ಟಿ ಅಂಗಡಿ ಕಿಟ್ಟಪ್ಪ .... ನನಗೊಂದು ರೊಟ್ಟಿ ತಟಪ್ಪ " ಹಾಡನ್ನು ಕೇಳಿದಾಗ ಅತೀವ ಆನಂದವಾಯಿತು .ಈಗಿನ "ಇಂಟರ್ನೆಟ್ ಜೆನೆರೇಶನ್ " ನವರ ಬಾಯಿನಲ್ಲೂ, ನಮ್ಮ ಕನ್ನಡದ ಶ್ರೀ.ಜಿ.ಪಿ .ರಾಜರತ್ನಂ ಅವರ "ಶಿಶು ಗೀತೆಗಳು" ಬರುತ್ತಿವೆಯಲ್ಲ ಎಂದು ಖುಷಿಯಾಯಿತು .ನಾನೂ ಚಿಕ್ಕಂದಿನಲ್ಲಿ ಹಾಡುತ್ತಿದ "ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ" ಎಂಬ ಮತ್ತೊಂದು ಪದ್ಯವೂ ನೆನಪಾಯಿತು. ಹಾಗೆಯೇ , ವಾಚಕರು ಜಿ.ಪಿ .ರಾಜರತ್ನಂ ರವರ ಬಗ್ಗೆ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ - ಅವರು ತಮಿಳು ಭಾಷೆಯಲ್ಲೂ ಒಳ್ಳೆಯ ಹಿಡಿತವನ್ನು ಸಾಧಿಸಿದ್ದರು . ತಮಿಳಿನ ಭಕ್ತಿ ಸಾಹಿತ್ಯದಲ್ಲಿ ಬರುವ ಆಳ್ವಾರುಗಳಲ್ಲಿ ಪ್ರಮುಖಳಾದ 'ಆಂಡಾಳ್' ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಗೊದಾದೇವಿಯು ಕರುಣಿಸಿರುವ 'ತಿರುಪ್ಪಾವೈ', ಪೆರಿಯಾಳ್ವಾರ್ ರವರ 'ತಿರುಪಲ್ಲಾಂಡು' - ಇವೇ ಮೊದಲಾದ ತಮಿಳು ಗ್ರಂಥಗಳನ್ನು ಕನಡಕ್ಕೆ ಸೊಗಸಾಗಿ ತರ್ಜುಮೆ ಮಾಡಿದ್ದಾರೆ . 


]



ನಾನು ಗಮನಿಸಿರುವ ಹಾಗೇ , ಈ ಕುಡುಕರ ಮಾತು ಒರಟಾಗಿದ್ದರೂ , ಅದರಲ್ಲಿ ಒಂದು ನೋವೂ ,ಒಂದು ಒಳ-ಆಶಯವೂ ಅಡಗಿರುತ್ತದೆ . ಮೊನ್ನೆ ನಾನು ಕಾಲೇಜಿಗೆ ಹೋಗುವಾಗ ನಮ್ಮ " ನಾಯಂಡಹಳ್ಳಿ ಮಹಾರಾಜನ" ಆಶೀರ್ವಾದದಿಂದಾಗಿ , ಒಬ್ಬ ವಯಸ್ಕ ಕುಡುಕನೊಡನೆ ಬಸ್ಸಿನಲ್ಲಿ ಮಾತುಕತೆಯಾಯಿತು ಎಂದು ತಿಳಿಸಿದೆನಷ್ಟೇ . ಈ ಕುಡುಕ ನಾನು ಹತ್ತಿದ ಬಸ್ಸಿಗೆ , ಮುಂಚಿನ ಯಾವುದೋ ಸ್ಟಾಪಿನಲ್ಲಿ ಹತ್ತಿರಬೇಕು . ತನ್ನ ವಿಚಿತ್ರ ಮಾತಿನ ಶೈಲಿಯಿಂದಾಗಿಯೂ , ತನ್ನ ಏರು ಧ್ವನಿಯ ಕೂಗಾಟಗಳಿಂದಲೂ ಬಸ್ಸಿನಲ್ಲಿ ಆ ಭೂಪ ಆಗಲೇ "ನೋಟೆಡ್" ಆಗಿದ್ದ.



ನಮ್ಮ ಕಂಡೆಕ್ಟರ್ - ಡ್ರೈವರುಗಳು , ಬಿ.ಎಂ.ಟಿ.ಸಿ ಬಸ್ಸುಗಳನ್ನು ಕೇವಲ ಮಾನವ ನಿರ್ಮಿತ ಯಂತ್ರವೆಂದೂ , ಅವುಗಳಿಗೆ ತನ್ನದೇ ಆದ ಮಿತಿಗಳು ಇರುತ್ತವೆಂದೂ ಭಾವಿಸುವುದಿಲ್ಲ . ಬದಲಿಗೆ ಅವರು ವಿಶಾಲ ಹೃದಯಿಗಳು ; ಈ ಬಸ್ಸುಗಳನ್ನು ಅವರು ಯಾವುದೋ "ದೈವ ನಿರ್ಮಿತ ಬಲೂನಿಗೆ" ಸಮನಾದ ವಸ್ತುವೆಂದು ತಿಳಿದಿರುತ್ತಾರೆ . ಮತ್ತೂ ಆ ಬಲೂನು ಒಡೆದು ಹೋಗುವುದಿಲ್ಲವೆಂದೂ ಭಾವಿಸಿರುತ್ತಾರೆ . ಹಾಗಾಗಿ , ಬಲೂನಿನೊಳಗೆ ಗಾಳಿಯನ್ನು ಹೆಚ್ಚೆಚ್ಚು ಊದಿ ಸೇರಿಸುವ ಹಾಗೇ , ಅವರ ಮನಸ್ಸಿಗೆ ಸಾಕು ಎನಿಸುವವರೆಗೂ ಜನರನ್ನು ಬಸ್ಸಿನೊಳಗೆ ಸೇರಿಸುತ್ತಾ ಹೋಗುತ್ತಾರೆ . ಆದುದ್ದರಿಂದ , ನಾವು ಬಸ್ಸಿನೊಳಗೆ ಜನ-ಸ್ತೋಮವನ್ನೇ ಕಾಣಲು , "ನಿಲ್ಲಲು ಜಾಗವೇ ಇಲ್ವಲ್ಲಾ ಸ್ವಾಮೀ " , "ಎನ್ರೀ ಕಾಲು ತುಳಿತ್ತಿದ್ದೀರಲ್ಲಾ ... ಕಣ್ಣು ಕಾಣಲ್ವೇ ? " ಎಂಬ ಪ್ರಯಾಣಿಕರ ಕೂಗಿಗೂ - ನಮ್ಮ ಕಂಡೆಕ್ಟರ್ - ಡ್ರೈವರುಗಳ ಈ ಭ್ರಮೆಯೇ ಕಾರಣವೆಂದು ನನಗನಿಸಿದೆ



ಮೊನ್ನೆ ನಾನು ಹತ್ತಿದ ಬಸ್ಸು ಕೂಡ ಜನ-ಜಂಗುಳಿಗಳಿಂದ ಕೂಡಿತ್ತು . ನಿಲ್ಲಲ್ಲು ಹಿಂದೆ ಎಲ್ಲೋ ಸ್ವಲ್ಪ ಜಾಗವಿದ್ದಂತೆ ಕಂಡಿತು . ನಾನೂ , ನನ್ನ ಮಿತ್ರರಾದ - ಶ್ರೀ ಪ್ರಶಾಂತ್ ರವರು ಮತ್ತು ಶ್ರೀ ನಿಂಗ್ರಾಜ್ ರವರು ಅಲ್ಲಿ ಹಬ್ಬಿದ್ದ ಜನಸ್ತೋಮವನ್ನು ಕಷ್ಟ ಪಟ್ಟು ದಾಟಿ ಅಲ್ಲಿ ಹೋಗಿ ನಿಂತೆವು . ನಮ್ಮ ಅದೃಷ್ಟವೋ-ದುರದೃಷ್ಟವೋ ; ನಾವು ನಿಂತ ಜಾಗದ ಪಕ್ಕದಲ್ಲೇ , ಕಿಟಕಿ ಸೀಟಿನ ಬಳಿ , ನಮ್ಮ ಕಥಾನಾಯಕ ಕೂತಿದ್ದರು . ಅವರ ಚಲನ-ವಲನಗಳಿಂದಲೇ ಅವರು ಕುಡಿದಿದ್ದರು ಎಂಬುದಾಗಿ ನಾವು ಖಚಿತಪಡಿಸಿಕೊಂಡೆವು . ಆಶ್ಚರ್ಯವೆಂದರೆ ಅವರ ಕಣ್ಣು ಒದ್ದೆಯಾಗಿತ್ತು . ಬಹುಷಃ ಕುಡುಕನ ಕಣ್ಣೀರಿರಬೇಕೆಂದು ನಾನು ಸುಮ್ಮನಾದೆ . ಆತ ನಾನು ಬಂದದನ್ನು ಕಂಡು , ತಮ್ಮ ನೆಚ್ಚಿನ ಪ್ರತಿನಿಧಿಯಾದ "ದೇವದಾಸ್" ಗಡ್ದವು ನನ್ನಲ್ಲಿ ಬೆಳೆದಿರುವುದನ್ನು ನೋಡಿ , ತಮ್ಮ ದುಃಖದ ಉದ್ರೇಕವನ್ನು ಕಡಿಮೆ ಮಾಡಿಕೊಂಡು , ತಮ್ಮ ಅಮೂಲ್ಯವಾದ ಕಣ್ಣೀರು ಎಲ್ಲಿ ನೆಲಕ್ಕೆ ಬಿದ್ದು ಹಾಳಾಗುತ್ತದೋ ಎಂಬ ಭೀತಿಯಿಂದಲೋ ಏನೋ , ಗಾಬರಿಯಿಂದ ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಾ , ಸ್ವಲ್ಪ ಸಮಾಧಾನದಿಂದ , ನನ್ನನ್ನು ಉದ್ದೇಶಿಸಿ :



" ಅಣ್ಣಾ ... ನಿನ್ನೇ ಮಾರ್ಕೆಟ್ ತಾವ ನನ್ನ ತಮ್ಮನ್ ನೋಡ್ದೆ ಕಣ್ಣಣ್ಣ ... ಕಾಲು ಇಟ್ಕಂಡೆ ... ಅಣ್ಣ ಕಾಲು ಇಟ್ಕಂಡೇ ಕೇಳ್ದೆ , ' ಲೋ ಬಡ್ಡಿ ಹೈದ್ನೇ , ಊರಿಗ್ ಬಾರ್ಲ ... ಅವ್ವ ಕಾಯ್ತಾವ್ಳೆ ... ನಿನ್ ಮೂತಿ ನೋಡಿ ಅವ್ಳು ಒಂದು ತಿನ್ಗ್ಳು ಆಯಿತ್ಲ '. ಕಾಲು ಇಟ್ಕೊಂಡ್ರು .... ಅವನು ಬರಾಕಿಲ್ಲ ಅಂದ್ಬಿಟ ಅಣ್ಣ ... ಬೋ.ಮಗ ... ಸೂ.ಮಗ "




ಅಯ್ಯೋ ದೇವರೇ ! ನನಗೆ ಏಕೆ ಇಂತಹ ಸ್ಪೆಸಿಮೆನ್ಗಳು ಗಂಟು ಬೀಳುತ್ತಾರೋ ? ಮಹಾಭಾರತದಲ್ಲಿ ಕರ್ಣ ಭೀಷ್ಮರನ್ನು ಚೇಡಿಸಿದಾಗ , ಭೀಷ್ಮರು ಕರ್ಣನಿಗೆ ಹೇಳಿದ " ನಿನ್ನ ಮಾತು ನಿನ್ನ ಕುಲವನ್ನು ಸೂಚಿಸುತ್ತದೆ " ಎಂಬ ಉಪದೇಶವನ್ನು ಒಂದುವೇಳೆ ನಾನು ಆ ಕುಡುಕಪ್ಪನಿಗೆ ಕೊಟ್ಟರೆ , ಖಂಡಿತ ಆತ ನಾಲ್ಕು ಬಾರಿಸುತ್ತಾನೆ ಎಂಬುದಾಗಿ ನನ್ನ ಒಳ ಮನಸ್ಸು ಎಚ್ಚರಿಸಿತು . ಮತ್ತೂ ಆತನ ವೇಷ-ಭೂಷಣ , ಮಾತಿನ ಶೈಲಿ ನಮ್ಮ ಮಂಡ್ಯದವರ ತರಹ ಕಂಡಿತು . ಹಾಗಾಗಿ ನಾನು ಸ್ವಲ್ಪ ಧೈರ್ಯ ತಂದುಕೊಂಡು " ನೀವು ಮಂಡ್ಯದವರಾ ? " ಎಂದು ಕೇಳಿಯೇಬಿಟ್ಟೆ ! ಆತ " ಹೌದಣ್ಣ . ಮಂಡ್ಯದವರು . ಮೇಲುಕೋಟೆ ಕೇಳಿರ್ಬೇಕಲ್ವಾ ? ಅದ್ರ ತಾವ ಒಂದು ಹಳ್ಳಿ " ಅಂದುಬಿಟ್ಟ . ನಮ್ಮಂತಹ ನಾಮದ ಐಯ್ಯಂಗಾರಿಗಳಿಗೆ ಮೇಲುಕೋಟೆ ಅಥವಾ ತಿರುನಾರಯಣಪುರ ಎಂಬ ಹೆಸರು ಕೇಳಿದರೇ ಸಾಕು , ಏನೋ ಒಂದು ತರಹದ ಉತ್ಸಾಹ . ನಾನು ಅದೇ ಉತ್ಸಾಹದಿಂದಲೇ ಹೇಳಿದೆ " ಓ , ಮೇಲುಕೋಟೆನಾ ... ಅಲ್ಲಿಗೆ ಬಹಳ ಸಲ ಬಂದಿದ್ದೀನಿ " . ಆತ ತನ್ನ ಕಥೆಯಲ್ಲಿ ನಾನು ಉತ್ಸುಕನಾಗಿದ್ದೇನೆ ಎಂದು ಭಾವಿಸಿ , ಪುನಃ ತನ್ನ ಪೂರ್ತಾ ಕಥೆಯನ್ನು ನನಗೆ ಹೇಳಲು ಶುರು ಮಾಡಿದ .ಸಂಕ್ಷಿಪ್ತವಾಗಿ ಹೇಳಿ ಮುಗಿಸುವುದಾದರೆ :




ಆತ ಒಬ್ಬ ರೈತ . ಹಳ್ಳಿಯಲ್ಲಿರುವ ಕೆಲವು ಕುತಂತ್ರಿಗಳು ತನ್ನ ತಮ್ಮನಿಗೆ ತಲೆ ಕೆಡಿಸಿ , ಬೆಂಗಳೂರಿನಲ್ಲಿ ಹೆಚ್ಚು ದುಡಿಯಬಹುದೆಂದು ಆಸೆ ತೋರಿಸಿ , ಇಲ್ಲಿ ಸರ್ವರೂ ಐಶಾರಾಮಿ ಜೀವನವನ್ನು ನಡೆಸುತ್ತಿದ್ದಾರೆಂದು ಹೇಳಿ ತನ್ನ ತಮ್ಮನ ದಿಕ್ಕು ತಪ್ಪಿಸಿ , ಬೆಂಗಳೂರಿಗೆ ಕಳುಹಿಸಿದ್ದಾರೆ . ಅವನ ತಮ್ಮ ಊರು ಬಿಟ್ಟು , ಬೆಂಗಳೂರಿಗೆ ಬಂದು ಸುಮಾರು ಒಂದು ತಿಂಗಳೇ ಆಯಿತಂತೆ . ಆದರೂ , ಮನೆಗೆ ಒಂದು ಫೋನ್ ಮಾಡಿಯಾಗಲಿ ತನ್ನ ಯೋಗ-ಕ್ಷೇಮದ ಸಮಾಚಾರವನ್ನು ತಿಳಿಸಿಲ್ಲ . ನಮ್ಮ ಕುಡುಕಪ್ಪನ ತಾಯಿಗೆ ಆತಂಕ ಹೆಚ್ಚಾಗಿ , " ನೀನ್ ಒಬ್ಬನೇ ಊರ್ನಾಗೆ ಉಂಡರೆ ಸಾಕಾ ? ನಿನ್ನ್ ತಮ್ಮ ಬೆಂಗ್ಳೂರ್ನಾಗೆ ಹೆಂಗವ್ನೆ ಅಂತ ನಿಂಗ್ ಯೋಚನೆ ಇಲ್ವಾ ? " ಎಂದೆಲ್ಲಾ ಹೇಳಿದರಂತೆ . ಮಿಗಿಲಾಗಿ ಕುಡುಕಪ್ಪನ ತಾಯಿ "ಹಾರ್ಟ್ ಪೇಷಂಟ್ " ಆಗಿರುವುದರಿಂದ , ತಾಯಿಯ ಆರೋಗ್ಯದಕಡೆಗೆ ಹೆಚ್ಚು ಒಲವಿರುವ ನಮ್ಮ ಕುಡುಕಪ್ಪ - ತಾಯಿಯ ಅಣತಿಯ ಮೇರೆಗೆ ಬೆಂಗಳೂರಿಗೆ ಬಂದು ತನ್ನ ತಮ್ಮನನ್ನು ಹುಡುಕಲು ನಿರ್ಧರಿಸಿದನಂತೆ . ಆತನಿಗೆ ಬೆಂಗಳೂರಿನಲ್ಲಿ ಮಿಶ್ರ ಫಲ ಸಿಕ್ಕಿದೆ ; ಒಂದು ಕಡೆ ಮಾರುಕಟ್ಟೆಯಲ್ಲಿ , ಆತ ಹೊತ್ತು ತಂದ , ತನ್ನ ಜಮೀನಿನಲ್ಲೇ ಬೆಳೆದ ದಷ್ಟ -ಪುಷ್ಟ ಟೊಮೇಟೊಗಳು ಒಳ್ಳೆ ಬೆಲೆಗೆ ಮಾರಟವಾದದ್ದು ಶುಭ-ಸಮಾಚಾರವಾದರೆ ; ಆತನ ತಮ್ಮ , ಹಳ್ಳಿಗೆ ಹಿಂತಿರುಗಿ ಬರಲು ಒಪ್ಪದೇ ಇರುವುದು ದುಃಖದ ಸಂಗತಿ . ಆದುದ್ದರಿಂದ ನಮ್ಮ ಕುಡುಕಪ್ಪ ತನ್ನ ತಮ್ಮನ ಮೇಲೆ ಕುಪಿತನಾಗಿದ್ದಾನೆ . 


ಆತ ಕಥೆಯನ್ನು ತನ್ನದೇ ಶೈಲಿಯಲ್ಲಿ ವಿವರಿಸುತ್ತಾ , ಮಧ್ಯೆ-ಮಧ್ಯೆ ಕಣ್ಣು ಒರೆಸಿಕೊಳ್ಳುತ್ತಾ , ತಾನು ಟೊಮೇಟೊಗಳನ್ನು ಮಾರಿ ಬಂದ ದುಡ್ಡನ್ನು , ಜೋಬಿನಿಂದ ತೆಗೆದು ನಮಗೆಲ್ಲಾ ಜರ್ಬಿನಿಂದ ತೋರಿಸುತ್ತಾ ; ಆಗಾಗ ಕಥೆ ಹೇಳುವ ಶಾಸ್ತ್ರವನ್ನು ಕೊಂಚ ಹೊತ್ತು ನಿಲ್ಲಿಸಿ ಪುನಃ ಪ್ರಾರಂಭಿಸುತ್ತಿದ್ದ . ಆದರೆ , ಕಥೆ ಹೇಳುವಾಗ ಅನವಶ್ಯಕವಾಗಿ ಮಧ್ಯೆ ನಿಲ್ಲಿಸಿ , ಪುನಃ ಪ್ರಾರಂಭಿಸುವ ವಿಧಾನವನ್ನು ಯಾವ ಭಾಷೆಯ ವ್ಯಾಕರಣ ಶಾಶ್ತ್ರ ಒಪ್ಪುತದೆ ? - ಎಂದೆಲ್ಲಾ ನಾನು ಸಂಶೋಧನೆ ಮಾಡಲು ಹೋಗಲ್ಲಿಲ್ಲ ! ಆತ ಮಾತುಕತೆಯ ಮಧ್ಯೆ ಕೊಂಚ ವಿಶ್ರಾಮ ತೆಗೆದುಕೊಂಡಾಗ , ನಾನೂ " ಓ .. ಹಾಗಾ " , " ಅಳಬೇಡಿ ... ದೇವರು ಒಳ್ಳೇದು ಮಾಡ್ತಾನೆ " , " ಯೋಚನೆ ಮಾಡ್ಬೇಡಿ ... ಒಳ್ಳೇದು ಆಗುತ್ತೆ " ಎಂದೆಲ್ಲಾ ಧ್ವನಿ ಸೇರಿಸುತ್ತಿದೆ .



ಒಟ್ಟಿನಲ್ಲಿ , ಆತನ ಮಾತಿನ ಶೈಲಿ , ನನಗೂ ಮತ್ತೂ ನನ್ನ ಮಿತ್ರ ನಿಂಗರಾಜ್ ರವರಿಗೆ ಕೆಲವೊಮ್ಮೆ ಹಾಸ್ಯಾತ್ಮಕವಾಗಿ ಕಂಡರೂ , ಮತ್ತೊಮ್ಮೆ "ಬಾಳಿನ ಮರ್ಮ ತಿಳಿದವರ್ಯಾರು" ಎಂಬ ಉಕ್ತಿಯನ್ನು ನೆನಪಿಸಿ ನಮನ್ನು ವಿಚಾರಶೀಲರನ್ನಾಗಿ ಮಾಡುತ್ತಿತ್ತು . ಆದರೆ ನನ್ನ ಮತ್ತೊಬ್ಬ ಮಿತ್ರ ಪ್ರಶಾಂತ್ ಕುಡುಕಪ್ಪನ ಮಾತನ್ನು ಕೇಳಿ ಕಳವಳಗೊಂಡಿದ್ದರು ! ಅದಕ್ಕೆ ಕಾರಣ ಇಲ್ಲದೇ ಇಲ್ಲ . ನಮ್ಮ "ಕುಡುಕಪ್ಪ ಮಹಾಶಯ" ; ಆತನ ಕರುಣಾಜನಕ ಕಥೆಯನ್ನು ವಿವರಿಸುತ್ತಿರುವಾಗ , ಒಮ್ಮೆ ನಮ್ಮ ಪ್ರಶಾಂತ್ ರವರ ಕಡೆಗೆ ಕೈ ತೋರಿಸಿ 





" ನಮ್ಮ ತಮ್ಮ್ ನೂ ಹಿಂಗೆ ಇದ್ದ ಅಣ್ಣ ; ಸಂಣ್ ವಯಸ್ನಲ್ಲಿ . ನಾವು ಸಣ್ಣವರಿದ್ದಾಗ , ಜಮೀನಾಗೆ ನಾನು ಕೆಲಸ ಮಾಡ್ತಿದ್ದರೂ , ನಮ್ಮವ್ವ ಅವನಿಗೆ ಮಾತ್ರ ಬೆಣ್ಣೆ ಕೊಡ್ತಿದ್ದಳು . ಹಳ್ಳಿಯಾಗಿರ್ಬೇಕಾದರೇ ಎಷ್ಟು ಗುಂಡು-ಗುಂಡು ಆಗಿ .... ಅದೋ ಅವನ ತರಾನೆ ( ಪ್ರಶಾಂತ್ ತರಹ ) ಇದ್ದ . ಈಗ ಈ ಹಾಳು ಬೆಂಗಳೂರು ಪ್ಯಾಟೆ ಗೆ ಬಂದು ಜೀತ ಮಾಡಿಕೊಂಡು ಸೊರ್ಗೋಬಿಟ್ಟವ್ನೆ . ಆ ಹೈದ ನಿನ್ನೆ ರಾತ್ರಿ ಇಟೇ-ಇಟು ಚಿತ್ರಾನ್ನಕ್ಕೆ ೧೮ ರುಪಾಯಿ ಕೊಟ್ಟು ತಿಂದ . ನಮ್ಮ ಊರ್ರ್ನಾಗೆ ನಾವು ಲಾಟ್-ಲಾಟ್ ಆಗಿ ತಿನ್ತೀವಣ್ಣ ..... " - ತನ್ನ ಕಡೆಗೆ ಕೈ ಮಾಡಿ , ಮೇಲಾಗಿ ತನ್ನನ್ನೇ ಉದಾಹರಿಸಿ ಹೇಳುತಿದ್ದ ಕುಡುಕಪ್ಪನ ಈ ಮಾತುಗಳು , ಎಲ್ಲಿ " ನೀನೆ ನನ್ನ ತಮ್ಮ , ಊರಿಗೆ ಬಾ " ಎಂದು ಹೇಳಿಬಿಟ್ಟರೆ ಎಂಬ ಆತಂಕ - ಇವೆಲ್ಲಾ ನಮ್ಮ ಪ್ರಶಾಂತ ಕಳವಳಗೊಳ್ಳುವುದಕ್ಕೆ ಕಾರಣವಾಗಿತ್ತು .





ಹೀಗೆ , ತನ್ನ ಕಥೆಯಿಂದಲೂ , ಕಥೆ ಹೇಳುವ ಶೈಲಿಯಿಂದಲೂ , ಕುಡುಕಪ್ಪ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮನರಂಜಿಸುತ್ತಿರುವಾಗಲೇ - ನಮ್ಮ "ನಾಯಂಡಹಳ್ಳಿ ಮಹಾರಾಜನಿಗೆ" ಕಡೇಗೂ ಕರುಣೆ ಬಂತೆಂದು ಕಾಣಿಸುತ್ತದೆ , ಸಿಗ್ನಲ್ ಬಿಟ್ಟಿತು . ಆದರೆ ನಾವು ಇಳಿಯಬೇಕಿದ್ದ ಕಾಲೇಜಿನ "ಬಸ್ ಸ್ಟಾಪ್" ಇನ್ನೂ ಕೊಂಚ ದೂರದಲ್ಲಿತ್ತು . ತಾನು ಅನುಸರಿಸುತ್ತಿದ್ದ ಅಲಿಖಿತ ವಾಡಿಕೆಯಂತೆ ಕೊಂಚ ಸಮಯ ವಿರಮಿಸಿ, ಪೂರ್ವೊತ್ಸಾಹವನ್ನು ಪಡೆದು , ಸ್ವಲ್ಪ ಗದ್ಗದಿತ ಕಂಠದಿಂದಲೇ ಮತ್ತೊಮ್ಮೆ ನನ್ನನ್ನುದ್ದೇಶಿಸಿ :




" ಅಣ್ಣಾ ... ಬೆಂಗಳೂರ್ನಾಗೆ ಏನೈತೆ ಮಣ್ಣು ! ನಿಮ್ಮ ತರಾನೆ 'ಕನ್ನಡ'ಕ ಹಾಕಿಕೊಂಡು ( ಆತ ಇಲ್ಲಿ ಯಾವುದೇ ಪನ್ ಉದ್ದೇಶಿಸಿರಲ್ಲಿಲ್ಲ ) , ಬ್ಯಾಗ್ ನೇತಾಕೊಂಡು , ಯಾವ್ದೋ ಕಂಪನಿ-ಗಿಂಪನಿ ನಲ್ಲಿ ಜೀತ ಮಾಡಿಕೊಂಡು .... ಥು ! ನೆಮ್ಮದಿನೇ ಇಲ್ಲ್ವಲ್ಲಣ್ಣ . ನಮ್ಮ ಹಳ್ಳಿಗ ಒಂದ್ ಕಿತ ಬನ್ನಿ ( ಆತ ಕುಡುಕನೇ ಇರಬಹುದು . ಆತನಿಗೆ ತನ್ನ ಮಾತಿನ ಮೇಲೆ ಹತೋಟಿ ಇಲ್ಲದಿರಬಹುದು . ಆದರೂ , ಸರ್ವರನ್ನೂ ಸ್ವಾಗತಿಸುವ ನಮ್ಮ ಕನ್ನಡದವರ ಹೃದಯ ವೈಶಾಲ್ಯತೆಯನ್ನು ಆತ ಮರೆತಿರಲ್ಲಿಲ್ಲ ) . ನಾವು ರೈತರೇ ಇರಹಬಹುದು . ಆದ್ರೆ , ನಾವು ರಾಜರ ತರ ನೆಮ್ಮದಿಯಿಂದ , ನಾವು ಎಷ್ಟು ದುಡೀತೀವೋ ಅಷ್ಟರಲ್ಲಿ ಸಂತೃಪ್ತಿಯಿಂದ ಬದುಕ್ತೀವಿ . ಇಲ್ಲಿನ ಜನರಲ್ಲಿ ದುರಾಸೆ ಹೆಚ್ಚಾಗಿದೆ . ಬೇಕು-ಬೇಕು ಗಳಲ್ಲೇ ಜೀವನ ಮುಗಿಸಿಬಿಡ್ತಿರಲ್ಲಣ್ಣ . ಹೀಗೆ ಮುಂದುವರಿದರೆ , ನನ್ನ ಶಾಪ ಅಂತಾನೇ ತಿಳ್ಕಳಿ , ಬೆಂಗಳೂರ್ ಹಾಳಾಗಿ ಹೋಗುತ್ತೆ .... ಹಾಳಾಗಿ ಹೋಗುತ್ತೆ ಅಣ್ಣಾ ..... " ಎಂದ . " ಬೆಂಗಳೂರಿನ ಐಶಾರಾಮ್ಯತೆಗೆ" ಗಂಟು ಬಿದ್ದು , ಹಳ್ಳಿ ಬಿಟ್ಟು , ಬೆಂಗಳೂರಿಗೆ ಸೇರಿರುವ ತನ್ನ ತಮ್ಮನ ನೆನಪಾಗಿ ಪುನಃ ಅಳಲು ಶುರು ಮಾಡಿದ . ತನ್ನನು ತಾನೇ ಸಮಾಧಾನವೂ ಪಡಿಸಿಕೊಳ್ಳುತ್ತಿದ್ದ . 



ಆಗ ನನ್ನ ಯೋಚನಾ ಲಹರಿ ಈ "ಶಾಪ" ಎಂಬ ಪದ ಕೇಳಿ ; ಅದರ ಕಡೆ ಹೊರಟಿತು . ಈ ಶಾಪ-ಅದರ ವಿಮೋಚನೆ ಎಂಬುದನೆಲ್ಲಾ ಪುರಾಣಗಳಲ್ಲಿ ಕೇಳಿ-ಓದಿ-ತಿಳಿದುಕೊಂಡಿರುವಂತದ್ದು . ತತ್ ಕ್ಷಣ ಅದೇಕೋ ಏನೋ ನಮ್ಮಜ್ಜಿಯವರು ಒಮ್ಮೆ ನನಗೆ ಹೇಳಿದ್ದ , ಅಲುಮೇಲಮ್ಮ ಮೈಸೂರು ಮಹಾರಾಜರಿಗೆ ಇತ್ತ ಶಾಪ ಎಂದು ಕರೆಯುವ "ತಲಕಾಡು ಮರಳಾಗಿ , ಮಾಲಂಗಿ ಮಡುವಾಗಿ , ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ " ಎಂಬುದು ನೆನಪಾಯಿತು. ಈಗಲೂ ದಸರಾ ಉತ್ಸವದ ಸಂದರ್ಭದಲ್ಲಿ ಅಲುಮೇಲಮ್ಮನ ಪೂಜೆ ತಪ್ಪದೆ ನಡೆಯುತ್ತದೆ ಎಂಬ ವಿಚಾರವೂ ಹೊಳೆಯಿತು . ಹಾಗಿದ್ದರೇ , ನಮ್ಮ ಕುಡುಕಪ್ಪನ ಶಾಪವೂ ಫಲಿಸಿಬಿಟ್ಟರೆ ಗತಿಯೇನು ? - ಎಂದೆಲ್ಲಾ  ನಾನು ಯೋಚಿಸುತ್ತಿರುವಾಗಲೇ ಬಸ್ಸು ನಮ್ಮ ಕಾಲೇಜಿನ ಸ್ಟಾಪನ್ನು ಸಮೀಪಿಸುತ್ತಿರುವುದು ಕಂಡಿತು . ಇಷ್ಟು ಹೊತ್ತು ನನ್ನನ್ನು ತಮ್ಮ ಸಂಭಾಷಣೆಯ ಒಂದು ಭಾಗವನ್ನಾಗಿಸಿಕೊಂಡಿದ್ದ ಆ ಭೂಪನಿಗೆ ತಿಳಿಸದೇ ,ಬಸ್ಸಿನಿಂದ ಇಳಿದು ಹೋದರೆ ಸೌಜನ್ಯವಲ್ಲವಂದು ತಿಳಿದು , ಕುಡುಕಪ್ಪನಿಗೆ " ಯೋಚನೆ ಮಾಡ್ಬೇಡಿ ... ಎಲ್ಲ ಒಳ್ಳೆದಾಗುತ್ತೆ . ನಮಸ್ತೆ ! " ಎಂದು ಹೇಳಿ , ಪುನಃ ಅಲ್ಲಿ ನೆರೆದಿದ್ದ ಜನಸ್ತೋಮವನ್ನು ದಾಟಿ ಬಾಗಿಲ ಬಳಿ ಹೋಗಬೇಕೆಂದು ಮನಸ್ಸಿನ್ನಲೇ ಲೆಕ್ಕಾಚಾರ ಹಾಕ ತೊಡಗಿದೆ . ಅಷ್ಟರಲ್ಲಿ , ಅದೇ ಆಸಾಮಿ , " ಚೆನ್ನಾಗಿ ಓದಿ , ಒಂದು ಕೆಲ್ಸಕ್ಕೆ ಸೇರ್ಕೊಳಿ . ನೆಮ್ಮದಿಯಿಂದ ಜೀವನ ನಡೆಸಿ . ಆ ಬಡ್ಡಿ ಹೈದನ್ ( ತನ್ನ ತಮ್ಮನ ) ತರಾ ಚಂಗ್ಲು ಬುದ್ಧಿ ಕಲೀಬೇಡಿ . ಮಾದೇಶ ಒಳ್ಳೇದು ಮಾಡ್ಲಿ ! " ಎಂದು ನನ್ನನ್ನೂ , ನನ್ನ ಮಿತ್ರರನ್ನೂ ಹರಿಸಿದರು . ಕುಡುಕಪ್ಪನ ಆಶೀರ್ವಾದವನ್ನು ಪಡೆದ ನಾವೇ ಧನ್ಯರು ಎಂದು ಯೋಚಿಸಿ , ಬಸ್ಸಿನಲ್ಲಿ ತುಂಬಿದ್ದ ಜನ-ಜಂಗುಳಿಯನ್ನು ಯಶಸ್ವಿಯಾಗಿ ದಾಟಿ , ಬಾಗಿಲ ಬಳಿಯಿಂದಲೇ ಕುಡುಕಪ್ಪನ "ದಿವ್ಯ ದರ್ಶನ"ವನ್ನು ಪುನಃ ಪಡೆದುಕೊಂಡೆವು . ಕಡೇಗೂ ನಮ್ಮ ಸ್ಟಾಪ್ ಬಂದಿತು . ಬಸ್ಸಿನಿಂದ ಇಳಿದು ಕಾಲೇಜಿನೆಡೆಗೆ ದಾಪುಗಾಲು ಹಾಕತೊಡಗಿದೆವು .


ಕಾಲೇಜಿನಲ್ಲಿ ಅಂದಿನ ಪೂರ್ತಾ ದಿವಸ ನಮ್ಮ ಪ್ಲೇಸ್ಮೆಂಟ್ ಪ್ರಕ್ರಿಯೆಗೆ ಪೂರಕವಾಗಿರಲಿ ಎಂಬಂತೆ , ವಾಗ್ಮಿಗಳೂ,ವ್ಯಕ್ತಿ ವಿಕಸನದ ತರಬೇತಿದಾರರಾದ ಕೆಲವರನ್ನು ಕರೆಯಿಸಿ ಅವರಿಂದ ಒಂದು ಕಮ್ಮಟವನ್ನು ನಿಯೋಜಿಸಿದ್ದರು . ನಮ್ಮ ( ವಿದ್ಯಾರ್ಥಿಗಳ ) ಭವಿಷ್ಯ " ಕಾರ್ಪೊರೇಟ್ ಜಗತ್ತಿನಲ್ಲಿ" ಮಾತ್ರವಿದೆಯೆಂಬಂತೆ ,ನಾವು ಕಾರ್ಪೊರೇಟ್ ಬದುಕಿಗೆ ಹೇಗೆ ಒಗ್ಗಿಕೊಂಡು ನಡೆಯಬೇಕು ,ನಾವು ಕಾರ್ಪೊರೇಟ್ ಜೀವನಕ್ಕೆ ಅನುಗುಣವಾಗಿ ನಮ್ಮನ್ನು ನಾವು ಮಾರ್ಪಾಡುಗೊಳಿಸಬೇಕು ಹೇಗೆ - ಇತ್ಯಾದಿ ವಿಷಯಗಳ ಕುರಿತಾಗಿಯೇ ಮಾತನಾಡಿದರು . 




ಅಂದು ಮನೆಗೆ ಹಿಂತಿರುಗುವಾಗ ಪುನಃ "ನಾಯಂಡಹಳ್ಳಿ ಮಹಾರಾಜ"ನ ದರುಶನ ಭಾಗ್ಯವನ್ನು ಪಡೆಯಲೇಬೇಕಲ್ವೆ ? ಅದೃಷ್ಟವಶಾತ್ , ಸಂಜೆ ಬಸ್ಸಿನಲ್ಲಿ ಮನೆಗೆ ಹಿಂತಿರುಗುವಾಗ , ಅಷ್ಟಾಗಿ ಜನ-ಜಂಗುಳಿ ಇರಲಿಲ್ಲ . ಬಸ್ಸು ಮತ್ತೆ ಯಥಾಪ್ರಕಾರವಾಗಿ ನಮ್ಮ ನಾಯಂಡಹಳ್ಳಿ ಸಾಮ್ರಾಜ್ಯದಲ್ಲಿ ಬಂದು ನಿಂತಿತು . ಆಗ ನಾನು ಅಂದು ನಡೆದ ಘಟನೆಗಳನ್ನು ಒಮ್ಮೆ ವಿಮರ್ಶಿಸತೊಡಗಿದೆ . ಬೆಳಿಗ್ಗೆ ಕುಡುಕಪ್ಪನೊಟ್ಟಿಗೆ ನಡೆದ ಹೃದಯಸ್ಪರ್ಶೀ ಸಂಭಾಷಣೆ , ಆತ ನಾನು ಹುಟ್ಟಿ-ಬೆಳೆದಿರುವ ಸ್ಥಳವಾದ ಬೆಂಗಳೂರಿಗೆ "ಹಾಳಾಗಿ ಹೋಗುತ್ತೆ" ಎಂದು ಶಾಪ ನೀಡಿದ್ದು , ಇಲ್ಲಿನ ಜನರಲ್ಲಿ ನೆಮ್ಮದಿಯ ಕಾಣೆ ಎಂಬ ಅವನ ಉಕ್ತಿ - ಇವೆಲ್ಲವೂ ಒಂದು ಕಡೆಯಾದರೆ ; ಇದು ಕಾರ್ಪೊರೇಟ್ ಯುಗ . ಟ್ರೆಂಡ್ ಗೆ ತಕ್ಕಹಾಗೆ ಬದಲಾಗಬೇಕು , ಈ ಕಾರ್ಪೋರೇಟಿಸಂ ನಲ್ಲಿ ಹೆಚ್ಚಾಗುತ್ತಿರುವ ಹಗ್ಗ-ಜಗ್ಗಾಟದ ನಡುವೆ ಬದುಕುವುದು ಹೇಗೆ , ದುಡ್ಡೇ ಸರ್ವವೂ ಎಂಬ ನೀತಿ , ಈಗಿನವರ ಯಾಂತ್ರಿಕ ಬದುಕು - ಇವೆಲ್ಲವೂ ಮತ್ತೊಂದು ಕಡೆ . ಒಟ್ಟಿನಲ್ಲಿ ನಾನು ಯಾವುದೇ ಸ್ಪಸ್ಟ ನಿರ್ಧಾರಕ್ಕೆ ಬರಲಾಗಲ್ಲಿಲ್ಲ . ಇಷ್ಟು ಯೋಚಿಸುತ್ತಿರುವಾಗಲೇ ಸಿಗ್ನಲ್ ಬಿಟ್ಟು ಕೊಂಚ ಸಮಯವೇ ಆಗಿರಬೇಕು . ನಾನು ಇಳಿಯಬೇಕಿದ್ದ ನಿಲ್ದಾಣ ಇನ್ನೇನು ಬಂದೇಬಿಟ್ಟಿತು . 



ಕಡೇ ಮಾತು :

ನಾಯಂಡಹಳ್ಳಿ , ಬಹಳಷ್ಟು ಹೊತ್ತು ನಮ್ಮನ್ನು , ತನ್ನ ಬಳಿ ಇರಿಸಿಕೊಂಡು ಕಾಯಿಸಿದರೂ ; ಮನರಂಜನೆಗಾಗಿಯೂ , ನಮ್ಮ ವಿಚಾರ ಸರಣಿಗೆ ಹೊಸ ದೃಷ್ಟಿಕೋನವನ್ನು ನೀಡಲೂ - ಇಂತಹ ಹಲವಾರು ಘಟನೆಗಳನ್ನು ಪ್ರತಿ-ನಿತ್ಯ ನಮಗೆ ಉಡುಗೊರೆಯನ್ನಾಗಿ ನೀಡುತ್ತಾ , ನಮ್ಮ ಕಾಯುವಿಕೆಯ ನೋವನ್ನು ದೂರಮಾಡುತ್ತದೆ . ಈ ನಾಯಂಡಹಳ್ಳಿಯಲ್ಲಿ ಹಲವಾರು ಹೊಸ ಮಿತ್ರರ ಪರಿಚಯ ನನಗಾಗಿದೆ , ಸ್ನೇಹಿತರೊಡನೆ ವಿಚಾರ-ವಿನಿಮಯವಾಗಿದೆ , ವಿವಿಧ ವಿಷಯಗಳ ಬಗೆಗೆ ವಾದ-ಚರ್ಚೆಗಳೂ ನಡೆದಿದೆ , ಆಟ-ಪುಂಡಾಟಗಳೂ ನಡೆಯುತ್ತಲೇ ಇರುತ್ತವೆ .ಒಟ್ಟಿನಲ್ಲಿ ,ನಮ್ಮ ನಾಯಂಡಹಳ್ಳಿ , ತನ್ನ ಮೂಲಕ ಹಾದುಹೊಗುವವರ ನಿತ್ಯ ಜೀವನದ ಒಂದು ಅವಿನಾಭಾಜ್ಯ ಅಂಗ ! 



ಇಂತಹ , ನಾಯಂಡಹಳ್ಳಿ ಮಹಾರಾಜನಿಗೆ ಜಯವಾಗಲಿ ! ಶುಭವಾಗಲಿ ! ಕಂಗೊಳಿಸಲಿ ! 




ನಮಸ್ಕಾರಗಳೊಂದಿಗೆ .....

( ವಾಚಕರು ಮುದ್ರಾರಾಕ್ಷಸನ ಹಾವಳಿಯನ್ನು ಕ್ಷಮಿಸಲಿ .... )




ನಂದನ - ವೈಶಾಖ - ತದಿಗೆ 

(  ೨೪-೦೪-೨೦೧೨ )